ಗೋಣಿಕೊಪ್ಪಲು, ಸೆ. ೧೫: ಪೂರ್ವಜರು ನಡೆಸಿಕೊಂಡು ಬಂದಿರುವ ಭತ್ತದ ಕೃಷಿಯನ್ನು ಇಂದಿಗೂ ಮುಂದುವರೆಸಿಕೊAಡು ಬಂದಿರುವ ಶ್ರೀಮಂಗಲ ಹೋಬಳಿಯ ಅನೇಕ ರೈತರಿಗೆ ಇದೀಗ ಕಾಡಾನೆಗಳದ್ದೆ ಚಿಂತೆಯಾಗಿದೆ. ಹಿಂಡು ಹಿಂಡಾಗಿ ಸಮೀಪದ ಬ್ರಹ್ಮಗಿರಿ ಅರಣ್ಯ ಪ್ರದೇಶದಿಂದ ನಾಡಿಗೆ ಆಗಮಿಸುತ್ತಿರುವ ಕಾಡಾನೆಗಳು ಸಂಜೆಯ ವೇಳೆಯಲ್ಲಿ ರೈತರ ಭತ್ತದಗದ್ದೆ, ಕೆರೆ, ಕಾಫಿ, ಬಾಳೆ, ಅಡಿಕೆ, ತೆಂಗಿನತೋಟಕ್ಕೆ ಲಗ್ಗೆಯಿಟ್ಟು ಅಪಾರ ಪ್ರಮಾಣದ ನಷ್ಟ ಉಂಟು ಮಾಡುತ್ತಿವೆ. ಇದರಿಂದಾಗಿ ರೈತನ ಗೋಳು ಹೇಳತೀರದಾಗಿದೆ. ಕಾಡಾನೆಯ ಹಿಂಡು ಬೀರುಗ, ಕುರ್ಚಿ, ಈ ಭಾಗದಲ್ಲಿರುವ ಬಹುತೇಕ ರೈತರ ಬೆಳೆಗಳನ್ನು ಹಾಳು ಮಾಡುತ್ತಿದೆ. ರಾತ್ರಿ ವೇಳೆಯಲ್ಲಿ ದಾಳಿ ಮಾಡುತ್ತಿರುವ ಕಾಡಾನೆಗಳ ಹಿಂಡು ಮುಂಜಾನೆ ವೇಳೆ ಮತ್ತೆ ಸಮೀಪದ ಅರಣ್ಯ ಪ್ರದೇಶಕ್ಕೆ ತೆರಳುತ್ತಿವೆ. ರೈತರು ತಮ್ಮ ಅನುಕೂಲಕ್ಕಾಗಿ ತೋಡಿಕೊಂಡಿರುವ ಕೆರೆಗಳಲ್ಲಿ ಅಳವಡಿಸಿರುವ ಮೋಟರ್ ಹಾಗೂ ಪೈಪ್‌ಗಳನ್ನು ಕೂಡ ಆನೆಗಳು ತುಳಿದು ಹಾಳು ಮಾಡುತ್ತಿವೆ.
ಈ ಭಾಗದಲ್ಲಿ ಭತ್ತ ಬೆಳೆಯುವ ರೈತರು ಇನ್ನೂರಕ್ಕೂ ಆಧಿಕ ಏಕರೆಗಳಲ್ಲಿ ಭತ್ತ ಕೃಷಿ ಮುಂದುವರೆಸಿಕೊAಡು ಬಂದಿದ್ದಾರೆ. ಕುರ್ಚಿ, ಬೀರುಗ ಗ್ರಾಮದ ಅನೇಕ ಕುಟುಂಬಸ್ಥರು ಈಗಾಗಲೇ ನಾಟಿಕಾರ್ಯ ನಡೆಸಿ ಭತ್ತದ ಪೈರುತೆನೆ ಕಟ್ಟುವ ಹಂತಕ್ಕೆ ತಲುಪುತ್ತಿದ್ದಂತೆ ಕಾಡಾನೆಗಳು ತುಳಿದು ಹಾಳು ಮಾಡುತ್ತಿವೆ.
ಬ್ರಹ್ಮಗಿರಿ ಅರಣ್ಯ ವ್ಯಾಪ್ತಿಯಿಂದ ಬರುವ ಕಾಡಾನೆಗಳನ್ನು ತಡೆಗಟ್ಟಲು ಅರಣ್ಯ ಸಿಬ್ಬಂದಿ ಪ್ರಮುಖ ಸ್ಥಳಗಳಲ್ಲಿ ಕಾದು ಕುಳಿತರೂ ಕಾಡಾನೆಗಳು ರಾತ್ರಿಯ ವೇಳೆ ನಾಡಿನತ್ತ ಆಗಮಿಸುತ್ತಿರುವುದರಿಂದ ಇವುಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕಾಡಾನೆಗಳ ಉಪಟಳ ನಿರಂತರವಾಗಿದೆ. ಈ ಭಾಗದ ಬಹುತೇಕ ರೈತರು ತಮ್ಮ ಕಾಫಿ ತೋಟಗಳಿಗೆ ಸೋಲಾರ್ ಬೇಲಿಗಳನ್ನು ಅಳವಡಿಸಿದ್ದರೂ; ಇವುಗಳನ್ನು ಮುರಿದು ಕಾಡಾನೆಗಳು ತೋಟಕ್ಕೆ ಲಗ್ಗೆ ಇಡುತ್ತಿವೆ. ಅಲ್ಲದೆ ತೋಟದಲ್ಲಿ ಬೆಳೆದಿರುವ ಬೆಳೆಗಳನ್ನು ತಿನ್ನುತ್ತಿವೆ.
ಭೂಮಿಯನ್ನು ಪಾಳು ಬಿಡಬಾರದು ಎಂಬ ಉದ್ದೇಶದಿಂದ ಭತ್ತದ ಕೃಷಿಯನ್ನು ಇಂದಿಗೂ ಕೂಡ ಮುಂದುವರೆಸಿಕೊAಡೇ ಬಂದಿರುವ ರೈತರಿಗೆ ಇದೀಗ ಕಾಡಾನೆಗಳ ನಿರಂತರ ಉಪಟಳದಿಂದ ದಿಕ್ಕೆ ತೋಚದಂತಾಗಿದೆ. ಬೀರುಗ ಗ್ರಾಮದ ರೈತರಾದ ಐಯ್ಯಮಾಡ ಉದಯ್ ಎಂಬವರ ಗದ್ದೆಗೆ ದಾಳಿ ಇಟ್ಟಿರುವ ಕಾಡಾನೆ ಹಿಂಡು ಅಪಾರ ಪ್ರಮಾಣದಲ್ಲಿ ಹಾನಿ ಮಾಡಿದೆ.
ಪಹರೆ ಕಾರ್ಯ ನಡೆಯಬೇಕು
ಕಾಡಾನೆಗಳ ಉಪಟಳವಿದ್ದರೂ ಕೃಷಿ ಭೂಮಿಯನ್ನು ಪಾಳು ಬಿಡದೆ ಭತ್ತದ ಬೆಳೆ ಬೆಳೆಯುತ್ತಾ ಬಂದಿದ್ದೇವೆ. ಕಾಡಾನೆಗಳು ಬ್ರಹ್ಮಗಿರಿ ಅರಣ್ಯ ವ್ಯಾಪ್ತಿಯಿಂದ ಕತ್ತಲಾಗುತ್ತಿದ್ದಂತೆಯೇ ಗ್ರಾಮದತ್ತ ಹೆಜ್ಜೆ ಇಡುತ್ತವೆ. ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಆರ್‌ಆರ್‌ಟಿ ತಂಡ ಪ್ರತಿನಿತ್ಯ ನಿಗದಿತ ಸಮಯದಲ್ಲಿ ಪಹರೆಕಾರ್ಯ ನಡೆಸಿದಲ್ಲಿ ಕಾಡಾನೆಗಳು ನಾಡಿನತ್ತ ಬರುವುದನ್ನು ತಡೆಯಬಹುದು ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು. ನಷ್ಟ ಪರಿಹಾರವನ್ನು ನೀಡಬೇಕು ಎಂದು ಐಯ್ಯಮಾಡ ಉದಯ್ ಹೇಳಿದ್ದಾರೆ.
- ಹೆಚ್.ಕೆ. ಜಗದೀಶ್