ಸಿದ್ದಾಪುರ, ಸೆ ೧೩: ಕಾಡಾನೆ ದಾಳಿಗೆ ಸಿಲುಕಿ ಅಂಗವೈಫಲ್ಯದಿAದ ಬಳಲುತ್ತಾ ಕಷ್ಟಕ್ಕೆ ಸಿಲುಕಿದ್ದ ಕಾರ್ಮಿಕ ಶೇಖರ್ ಎಂಬವರಿಗೆ ವರ್ಷದ ನಂತರ ಕೊನೆಗೂ ರೂ. ೫ ಲಕ್ಷ ಪರಿಹಾರ ದೊರೆತಿದೆ.
ಕಳೆದ ವರ್ಷ ಬಿಬಿಟಿಸಿ ಕಂಪೆನಿಗೆ ಸೇರಿದ ತೂಬನಕೊಲ್ಲಿ ಕಾಫಿ ತೋಟದಲ್ಲಿ ಕಾರ್ಮಿಕನಾಗಿದ್ದ ಶೇಖರ್ ಕಾಫಿ ಕಣದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭ ಏಕಾಏಕಿ ಕಾಡಾನೆ ಯೊಂದು ಶೇಖರ್ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಬೆನ್ನಿನ ಮೂಳೆ ಮುರಿತಗೊಂಡು ಜೀವನ್ಮರಣ ಸ್ಥಿತಿಯಲ್ಲಿ ನರಳುತ್ತಿದ್ದ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಚಿಕಿತ್ಸೆ ಪಡೆದುಕೊಂಡ ಅವರು ಶಾಶ್ವತ ಅಂಗವೈಫಲ್ಯದಿAದ ಬಳಲುತ್ತಿದ್ದರು. ಅರಣ್ಯ ಇಲಾಖೆಯು ಗಾಯಗೊಂಡಿದ್ದ ಶೇಖರ್‌ಗೆ ಈ ಹಿಂದೆ ೨೦ ಸಾವಿರ ಹಣವನ್ನು ಮಾತ್ರ ನೀಡಿತ್ತು.
ಈ ವಿಷಯ ತಿಳಿದ ಸಮಾಜಸೇವಕ ಹೋರಾಟಗಾರ ಸಂಕೇತ್ ಪೂವಯ್ಯನವರು ಕಳೆದ ಕೆಲ ತಿಂಗಳ ಹಿಂದೆ ವೀರಾಜಪೇಟೆಯ ವಕೀಲ ನರೇಂದ್ರ ಕಾಮತ್ ಅವರನ್ನು ಶೇಖರ್ ವಾಸ ಮಾಡಿಕೊಂಡಿರುವ ಲೈನ್‌ಮನೆಗೆ ಕರೆದೊಯ್ದು, ಜಿಲ್ಲಾ ತಮಿಳು ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಶೇಖರ್ ಕುಟುಂಬಕ್ಕೆ ರೂ. ೧೫ ಸಾವಿರ ವೈಯಕ್ತಿಕ ಧನ ಸಹಾಯವನ್ನು ನೀಡಿದ್ದರು. ಅಲ್ಲದೇ ಅರಣ್ಯ ಇಲಾಖಾ ಅಧಿಕಾರಿಗಳು ಶೇಖರ್‌ಗೆ ಪರಿಹಾರ ನೀಡದ ಬಗ್ಗೆ ವಕೀಲರ ಮುಖಾಂತರ ಶೇಖರ್‌ನಿಂದ ವಕಾಲತ್ತಿಗೆ ಸಹಿ ಪಡೆದು ನ್ಯಾಯಾಲಯದಲ್ಲಿ ಅರಣ್ಯ ಇಲಾಖೆಯ ವಿರುದ್ಧ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನು ನೀಡಿದ್ದರು. ಅಲ್ಲದೇ ವಕೀಲ ನರೇಂದ್ರ ಕಾಮತ್ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಅರಣ್ಯ ಸಚಿವರಿಗೆ ಹಾಗೂ ರಾಜ್ಯದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಹಾಗೂ ಕಾರ್ಮಿಕ ಅಧಿಕಾರಿಗಳಿಗೆ ಶೇಖರ್ ನಿಗೆ ಪರಿಹಾರ ನೀಡುವಂತೆ ಪತ್ರಗಳನ್ನು ರವಾನಿಸಲಾಗಿತ್ತು. ಅರಣ್ಯ ಇಲಾಖೆಯ ಮೇಲಾಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಸಂಕೇತ್ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ರೂ. ೫ ಲಕ್ಷ ಹಣವನ್ನು ಶೇಖರ್ ಅವರ ಖಾತೆಗೆ ಅರಣ್ಯ ಇಲಾಖೆ ಬಿಡುಗಡೆಗೊಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಕೇತ್ ಪೂವಯ್ಯ ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿಮೀರಿದ್ದು, ಕಾಡಾನೆಗಳ ಹಾವಳಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಕಂದಕಗಳನ್ನು ಹಾಗೂ ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಾಣ ಮಾಡಬೇಕು ತಜ್ಞರ ಸಮಿತಿಯೊಂದನ್ನು ರಚಿಸಬೇಕು ಹಾಗೂ ಕಾಡಾನೆ ದಾಳಿಯಿಂದ ಜಿಲ್ಲೆಯಲ್ಲಿ ನೂರಾರು ಮಂದಿ ಶಾಶ್ವತ ಅಂಗವೈಫಲ್ಯದಿAದ ಬಳಲುತ್ತಿದ್ದು, ಅವರುಗಳಿಗೂ ಕೂಡ ಹೆಚ್ಚಿನ ಮೊತ್ತದ ಪರಿಹಾರವನ್ನು ಅರಣ್ಯ ಇಲಾಖೆ ಒದಗಿಸಿಕೊಡಬೇಕೆಂದು ಸಂಕೇತ್ ಆಗ್ರಹಿಸಿದ್ದಾರೆ.