ಕಣಿವೆ, ಸೆ. ೧೩ : ಕೊಡಗು ಜಿಲ್ಲೆಯ ಐದನೇ ತಾಲೂಕಾಗಿ ಉದಯವಾದ ಕುಶಾಲನಗರ ತಾಲೂಕಿಗೆ ಜಿಲ್ಲಾಡಳಿತ ಅಥವಾ ರಾಜ್ಯ ಸರ್ಕಾರದಿಂದ ಅಭಿವೃದ್ಧಿಯ ಹೊಸ ಸ್ಪರ್ಶ ಇನ್ನಷ್ಟೇ ದೊರಕಬೇಕಿದೆ.
ಕಂದಾಯ ಸಚಿವ ಆರ್. ಅಶೋಕ್ ಅವರಿಂದ ತರಾತುರಿಯಲ್ಲಿ ಉದ್ಘಾಟನೆಗೊಂಡ ತಾಲೂಕು ಕಾರ್ಯಾಲಯ ತಾತ್ಕಾಲಿಕವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿಯೇ ಆರಂಭವಾಗಲಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದರು. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವಿಶಾಲವಾದ ಗೋದಾಮನ್ನು ಕಚೇರಿಗಳಾಗಿ ಪರಿವರ್ತಿಸಲು ಸಾಕಷ್ಟು ಅನುದಾನದ ಅಗತ್ಯ ಇತ್ತು. ಜೊತೆಗೆ ಅಲ್ಲಿನ ಆಡಳಿತ ಮಂಡಳಿ ಹೊಸ ತಾಲೂಕು ಕಚೇರಿಗೆ ಈ ಗೋದಾಮು ಬಿಟ್ಟುಕೊಡಲು ಮಾಸಿಕ ೮೦ ಸಾವಿರ ರೂ.ಗಳ ಬಾಡಿಗೆಯನ್ನು ವಿಧಿಸಿದ್ದ ರಿಂದಾಗಿ ಅಷ್ಟೊಂದು ಮೊತ್ತದ ಹಣವನ್ನು ನೀಡಲೊಪ್ಪದ ಕಂದಾಯ ಇಲಾಖೆ ತಾತ್ಕಾಲಿಕವಾಗಿ ಕುಶಾಲನಗರ ಹೋಬಳಿ ಕಚೇರಿಯ ಹಳೆಯ ಕಟ್ಟಡವನ್ನು ನವೀಕರಣ ಮಾಡಿ ಕೊಂಡು ಅಲ್ಲಿಂದಲೇ ಆಡಳಿತ ಶುರು ಮಾಡಿದೆ.
ಕುಶಾಲನಗರ ಹೊಸ ತಾಲೂಕಿನ ಮೊದಲ ತಹಶೀಲ್ದಾರ್ ಆಗಿ ಟಿ.ಎಂ. ಪ್ರಕಾಶ್, ಶಿರಸ್ತೇದಾರ್ ಆಗಿ ವಿನು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಮೊದಲೇ ಹೋಬಳಿ ಕೇಂದ್ರ ಹಾಗೂ ನೆಮ್ಮದಿ ಕೇಂದ್ರಗಳಿದ್ದು ಕಿಷ್ಕಿಂದೆ ಯಾಗಿರುವ ಇಲ್ಲಿ ತಾಲೂಕು ಆಡಳಿತ ಕಚೇರಿಯೂ ಸೇರಿಕೊಂಡ ದ್ದರಿಂದ ಸಹಜವಾಗಿಯೇ ಜನಜಂಗುಳಿ ಏರ್ಪಡುತ್ತಿದೆ.
ದಿನಂಪ್ರತೀ ತಾಲೂಕು ವ್ಯಾಪ್ತಿಯ ನೆಲ್ಲಿಹುದಿಕೇರಿ, ವಾಲ್ನೂರು, ತ್ಯಾಗತ್ತೂರು, ಶಿರಂಗಾಲ, ತೊರೆನೂರು, ಹುದುಗೂರು, ಮದಲಾಪುರ, ಶಿರಹೊಳಲು, ಹುಲುಗುಂದ, ಯಡವನಾಡು, ಸುಂಟಿಕೊಪ್ಪ, ಕಂಬಿಬಾಣೆ ಹೀಗೆ ಹತ್ತಾರು ಗ್ರಾಮಗಳ ಜನರು ಸರ್ಕಾರದ ಸವಲತ್ತುಗಳನ್ನು ಪಡೆಯಲು ವಿವಿಧ ದಾಖಲಾತಿಗಳಿಗಾಗಿ ನಿತ್ಯವೂ ಕಚೇರಿಗಳಿಗೆ ಆಗಮಿಸುತ್ತಿರುವುದರಿಂದ ಸಿಬ್ಬಂದಿಗಳು ಜನರನ್ನು ಹೆಚ್ಚಾಗಿ ಸತಾಯಿಸದೇ ಅಥವಾ ಅಡ್ಡಾಡಿಸದೇ ಕ್ಷಿಪ್ರಗತಿಯಲ್ಲಿ ಕೆಲಸ ಮಾಡಿಕೊಡಲು ವಿಶೇಷ ಆಸಕ್ತಿ ವಹಿಸಬೇಕಿದೆ. ಹೊಸ ತಾಲೂಕು ಕಚೇರಿಯ ಮೇಲೆ ಜನರಿಗೆ ಪರಿಕಲ್ಪನೆಗಳು, ಹೊಸ ನಿರೀಕ್ಷೆಗಳು ಇರುತ್ತವೆ. ಆದ್ದರಿಂದ ಜನರ ಕೆಲಸ ಕಾರ್ಯಗಳು ವಿಳಂಬವಾಗದAತೆ ಹಾಗೂ ಲಂಚಗುಳಿತನ ನಡೆಯದಂತೆ ಎಚ್ಚರಿಕೆ ವಹಿಸಬೇಕಿರುವುದು ಹೊಸ ಸಿಬ್ಬಂದಿಗಳ ಬದ್ಧತೆಯಾಗಬೇಕಿದೆ.
ಈಗಾಗಲೇ ಕುಶಾಲನಗರ ತಾಲೂಕಿಗೆ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿಯೋಜನೆ ಆದರೆ ಆಯ್ದ ಪ್ರಮುಖ ವಿವಿಧ ಇಲಾಖೆಗಳು ಇಲ್ಲಿ ತೆರೆದುಕೊಂಡAತಾಗುತ್ತದೆ.
ಈಗಾಗಲೇ ಕುಶಾಲನಗರದಲ್ಲಿ ಡಿವೈಎಸ್ಪಿ ಕಚೇರಿ, ಖಜಾನೆ, ಅಗ್ನಿ ಶಾಮಕ ಠಾಣೆ, ತಾಲೂಕು ಆರೋಗ್ಯಾಧಿಕಾರಿ, ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಸೇರಿ ದಂತೆ ಹಲವು ಅಗತ್ಯ ಕಚೇರಿಗಳು ಇರುವುದರಿಂದ ನೂತನ ತಾಲೂಕು ಎಲ್ಲಾ ಇಲಾಖಾ ಕಚೇರಿ ಗಳನ್ನು ಬಹು ಬೇಗ ಹೊಂದುವುದು ಕಷ್ಟ ಸಾಧ್ಯವಾಗದು.
ತಾಲೂಕಿನ ಚಟುವಟಿಕೆಗೆ ಸರ್ಕಾರ ಈಗಾಗಲೇ ಬಿಡುಗಡೆ ಗೊಳಿಸಿರುವ ೫೦ ಲಕ್ಷ ರೂ.ಗಳ ಹಣವನ್ನು ಜಿಲ್ಲಾಧಿಕಾರಿಗಳ ಬಳಿ ಇದ್ದಲ್ಲಿ ಆ ಹಣವನ್ನು ಜಿಲ್ಲಾಧಿ ಕಾರಿಗಳು ತಾಲೂಕು ಕಚೇರಿಗೆ ಬಿಡುಗಡೆ ಮಾಡಿದರೆ ಸಿಬ್ಬಂದಿಗಳು ಆ ಹಣದಲ್ಲಿ ಹೊಸ ಹೊಸ ಟೇಬಲ್, ಕುರ್ಚಿ, ಬೆಂಚುಗಳನ್ನು ಖರೀದಿಸಿ ಆಡಳಿತದಲ್ಲಿ ಹೊಸತನ ನೀಡಲು ಅನುಕೂಲ ವಾಗುತ್ತದೆ. ಕಚೇರಿಯಲ್ಲಿ ಸಿಬ್ಬಂದಿಗಳು ಹಳೆಯ ಪರಿಕರಗಳನ್ನೇ ಹೊಂದಿ ರುವುದು ಕಂಡುಬರುತ್ತಿದೆ.
(ಮೊದಲ ಪುಟದಿಂದ) ಜೊತೆಗೆ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಮೂಲ ಸೌಕರ್ಯಗಳಲ್ಲಿ ಒಂದಾದ ಶೌಚಾಲಯವನ್ನು ಒದಗಿಸಬೇಕಾದುದು ಅತೀ ತುರ್ತು ಅನಿವಾರ್ಯ. ಈಗಾಗಲೇ ನಾಡಕಚೇರಿ ಬಳಿ ಹೊಸದಾಗಿ ನಿರ್ಮಿಸಿರುವ ಶೌಚಾಲಯಕ್ಕೆ ಬೀಗ ಜಡಿದು ವರ್ಷಗಳೇ ಉರುಳಿವೆ. ಇನ್ನಾದರೂ ಈ ಶೌಚಾಲಯದ ಬೀಗವನ್ನು ತೆರೆದು ಸಾರ್ವಜನಿಕರ ಉಪಯೋಗಕ್ಕೆ ಒದಗಿಸಬೇಕಿದೆ.
ಹಾಗೆಯೇ ಇಲಾಖೆ ಅಥವಾ ದಾನಿಗಳ ಸಹಕಾರದಿಂದ ಕಚೇರಿಯ ಹೊರ ಆವರಣದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಡುವತ್ತ ತಹಶೀಲ್ದಾರ್ ಅಥವಾ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕಿದೆ.
ಒಟ್ಟಾರೆ ಶಾಸಕರು ಹೊಸ ತಾಲೂಕಿನ ನೂತನ ಆಡಳಿತ ಸೌಧಕ್ಕೆ ಶೀಘ್ರ ಸೂಕ್ತ ಜಾಗವನ್ನು ಪತ್ತೆಹಚ್ಚಿ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಕಂದಾಯ ಇಲಾಖೆಗೆ ಕೊಡಿಸುವ ಮೂಲಕ ಪೂರಕವಾದ ಅನುದಾನವನ್ನು ತಂದು ಬೇಗನೇ ಹೊಸ ಕಟ್ಟಡ ತಲೆ ಎತ್ತುವಂತೆ ಮಾಡುವಲ್ಲಿ ಶ್ರಮಿಸಬೇಕಿದೆ.
-ಕೆ.ಎಸ್. ಮೂರ್ತಿ