ಮಡಿಕೇರಿ, ಸೆ. ೧೩: ವೀರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮಕ್ಕೆ ಕಾಡಾನೆಗಳ ಹಿಂಡು ಲಗ್ಗೆಯಿಟ್ಟು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಪುಲಿಯಂಡ ಜಗದೀಶ್ ಅವರ ಗದ್ದೆಗೆ ಇಳಿದ ಆನೆಗಳು ಭತ್ತದ ಬೆಳೆಯನ್ನು ನಾಶಪಡಿಸಿದೆ. ಮಾಹಿತಿ ಪಡೆದ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ದೇವಯ್ಯ ಅವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ವಲಯಾಧಿಕಾರಿ ಶ್ರೀಶೈಲ ಮತ್ತು ಆರ್ ಆರ್ ಟಿ ತಂಡದ ಸದಸ್ಯರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಶೀಘ್ರವಾಗಿ ನಷ್ಟ ಪರಿಹಾರ ನೀಡಲು ವರದಿ ಸಲ್ಲಿಸುವುದಾಗಿ ಮತ್ತು ಮುಂದೆ ಆನೆಗಳು ಗ್ರಾಮಕ್ಕೆ ಬರದಿರುವ ಹಾಗೆ ಜಾಗೃತಿ ಕ್ರಮ ಕೈಗೊಳ್ಳುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದರು.
ಭತ್ತದ ಬೆಳೆ ಬೆಳೆಯುವುದು ಸದ್ಯದ ಪರಿಸ್ಥಿತಿಯಲ್ಲಿ ಕ್ಲಿಷ್ಟಕರ ಆಗಿದ್ದು, ಆನೆ ದಾಳಿಯಿಂದ ಭತ್ತ ಬೆಳೆಯುವುದು ತ್ರಾಸದಾಯಕವಾಗಿದೆ. ತಾವು ಐದು ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆದಿದ್ದು, ಇದನ್ನು ಕೊಯ್ಲಿನ ವರೆಗೆ ಕಾಪಾಡಿಕೊಳ್ಳಲು ಹಗಲು ರಾತ್ರಿ ಚಿಂತಿಸಬೇಕಾಗಿದೆ ಎಂದು ರೈತ ಪುಲಿಯಂಡ ಜಗದೀಶ್ ಬೇಸರ ವ್ಯಕ್ತಪಡಿಸಿದರು. ಮಾಹಿತಿ ದೊರೆತ ತಕ್ಷಣವೇ ಅರಣ್ಯ ಇಲಾಖೆ ಸ್ಪಂದಿಸಿದಕ್ಕೆ ಅವರು ಸೇರಿದಂತೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.