ಕಣಿವೆ, ಸೆ. ೧೩: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮುಂಬದಿಯಲ್ಲಿ ನಿಂತಿದ್ದ ಮತ್ತೊಂದು ಕಾರ್ ಹಾಗೂ ಸಾರಿಗೆ ಬಸ್‌ಗೆ ಡಿಕ್ಕಿಯಾದ ಘಟನೆ ಕುಶಾಲನಗರ ಸಮೀಪದ ಆನೆಕಾಡಿನಲ್ಲಿ ನಡೆದಿದೆ.
ಮಡಿಕೇರಿಯಿಂದ ಕುಶಾಲನಗರದತ್ತ ಆಗಮಿಸುತ್ತಿದ್ದ ಸಾರಿಗೆ ಬಸ್ ಪ್ರಯಾಣಿಕರನ್ನು ಇಳಿಸಲೆಂದು ಆನೆಕಾಡು ಡಿಪೋ ಬಳಿ ನಿಲುಗಡೆಗೊಳಿಸಿತ್ತು. ಇದರ ಹಿಂದೆ ಸುಂಟಿಕೊಪ್ಪ ಮೂಲದ ಅಬ್ದುಲ್ ಸಲಾಂ ಎಂಬವರ ಮಾರುತಿ ಸ್ವಿಫ್ಟ್ ಕಾರು ಮುಂಭಾಗದಲ್ಲಿ ವಾಹನಗಳು ಆಗಮಿಸುತ್ತಿದ್ದ ಕಾರಣ ಓವರ್ ಟೇಕ್ ಮಾಡಲು ಸಾಧ್ಯವಾಗದ ಕಾರಣ ಬಸ್ಸಿನ ಹಿಂದೆ ನಿಲ್ಲಿಸಲಾಗಿತ್ತು. ಈ ಸಂದರ್ಭ ಹಿಂಬದಿಯಿAದ ವೇಗವಾಗಿ ಬಂದ ಚವರ್ಲೆಟ್ ಕಾರು ಸ್ವಿಫ್ಟ್ ಕಾರಿನ ಹಿಂಬದಿಗೆ ಅಪ್ಪಳಿಸಿ ಅದೇ ವೇಗದಲ್ಲಿ ಬಸ್‌ನ ಹಿಂಭಾಗಕ್ಕೆ ಡಿಕ್ಕಿಯಾಗಿ ಹೆದ್ದಾರಿ ಬದಿ ಗುಂಡಿಗೆ ಮಗುಚಿ ಬಿದ್ದಿದೆ.
ಘಟನೆಯಲ್ಲಿ ಸ್ವಿಫ್ಟ್ ಕಾರಿನಲ್ಲಿದ್ದ ಅಫ್ಸಲ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರ್ಕಳ ಮೂಲದ ಚವರ್ಲೆಟ್ ಕಾರು ಚಾಲಕ ಸುಜಿತ್ ಎಂಬಾತನನ್ನು ವಶಕ್ಕೆ ಪಡೆದ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.