ಅನಿಲ್ ಎಚ್.ಟಿ.

ಮಡಿಕೇರಿ, ಸೆ. ೧೩: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿನ ನಗರಸಭೆಗೆ ೩೦ ತಿಂಗಳಿನಿAದ ಅಧ್ಯಕ್ಷ, ಉಪಾಧ್ಯಕ್ಷರೇ ಇಲ್ಲ. ಕಾನೂನು ಪ್ರಕಾರ ಜನರಿಂದ ಮತಗಳಿಸಿ ಆಯ್ಕೆಯಾದ ಸದಸ್ಯರಿದ್ದರೂ ಅಧಿಕಾರವನ್ನು ಅಧಿಕೃತವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಮಡಿಕೇರಿ ನಗರದ ಸ್ಥಿತಿಗತಿಗಳ ಬಗ್ಗೆ, ನಗರದ ಪ್ರಗತಿ ಬಗ್ಗೆ ಚರ್ಚಿಸಲು ನಗರಸಭೆಯ ಸದಸ್ಯರೇ ಸಭೆ ಸೇರಲು ಅಸಾಧ್ಯವಾಗಿದೆ.

ಮಡಿಕೇರಿ ನಗರಸಭೆಯ ೨೩ ಸದಸ್ಯರು ಸಭೆ ನಡೆಸಲು, ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಇನ್ನೂ ಆಗಿಲ್ಲ. ಯಾಕೆ ಆಯ್ಕೆ ಪ್ರಕ್ರಿಯೆ ನಡೆದಿಲ್ಲ ಎಂದರೆ ಕೋವಿಡ್ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸದಸ್ಯರು ಒಟ್ಟು ಸೇರುವುದಕ್ಕೆ ಸರ್ಕಾರದ ಕಾನೂನು ನಿರ್ಬಂಧ ಇದೆ.

ಅರೆ, ಇದೆಂಥ ನಿಯಮ ಎಂದಿರಾ.. ಸರ್ಕಾರದ ಕೆಲವು ನಿಯಮಗಳು ಇರುವುದೇ ಹೀಗೆ. ಹಾಸ್ಯಾಸ್ಪದ ಮತ್ತು ನಂಬಲೂ ಆಗದಂಥ ನಿಯಮಗಳಿವು.

ಮಡಿಕೇರಿ ನಗರಸಭೆಗೆ ಈಗಾಗಲೇ ಚುನಾಯಿತರಾದ ೨೩ ಸದಸ್ಯರು ನಗರಸಭೆಯ ಸಭಾಂಗಣದಲ್ಲಿ ಒಟ್ಟು ಸೇರಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕು. ಆದರೆ ಹೀಗೆ ೨೩ ಸದಸ್ಯರು ಸೇರುವುದಕ್ಕೆ ಸರ್ಕಾರದ ಕೋವಿಡ್ ನಿಯಮ ಅಡ್ಡಿಯಾಗಿದೆ.

(ಮೊದಲ ಪುಟದಿಂದ) ಕೋವಿಡ್ ಸಂದರ್ಭದಲ್ಲಿ ಹೀಗೆ ಸಭೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಸುವಂತಿಲ್ಲ ಎಂಬ ನಿಯಮಗಳ ನೆಪವೊಡ್ಡಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅಥವಾ ಚುನಾವಣಾ ಪ್ರಕ್ರಿಯೆಗೆ ಸರ್ಕಾರ ತಡೆಯೊಡ್ಡಿದೆ.

ಗಮನಿಸಿ ನೋಡಿ...

ಮಡಿಕೇರಿಗಿಂತ ೩೦ ಪಟ್ಟು ದೊಡ್ಡದಾದ ಮೈಸೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಆಯ್ಕೆ ನೂರಾರು ಜನರ ಸಮ್ಮುಖದಲ್ಲಿ ಕಳೆದ ತಿಂಗಳು ನಡೆದಿದೆ. ಅಲ್ಲಿಗೆ ಕೋವಿಡ್ ನಿಯಮ ಅಡ್ಡಿಯಾಗಲೇ ಇಲ್ಲ.

ಕಲಬುರ್ಗಿ, ಬೆಳಗಾವಿ ಸೇರಿದಂತೆ ರಾಜ್ಯದ ಕೆಲವೆಡೆ ಸಾವಿರಾರು ಜನ ಪಾಲ್ಗೊಂಡು ಅಲ್ಲಿನ ಮಹಾನಗರ ಪಾಲಿಕೆಯ ಚುನಾವಣೆ ನಡೆಸಿದ್ದಾರೆ. ಇದೀಗ ಮೇಯರ್, ಉಪಮೇಯರ್ ಆಯ್ಕೆಯೂ ಇದೇ ವಾರ ಅಧಿಕೃತವಾಗಿ ಆಗಲಿದೆ. ಅಲ್ಲಿಗೆ ಕೋವಿಡ್ ನಿಯಮದ ತಡೆ ಇಲ್ಲ.

ದೂರದ ಮಾತೇಕೆ, ಕೊಡಗಿನ ವೀರಾಜಪೇಟೆ, ಸೋಮವಾರಪೇಟೆಯ ಪಟ್ಟಣ ಪಂಚಾಯತ್‌ಗಳ ೩ ಸ್ಥಾನಗಳಿಗೂ ಕಳೆದ ವಾರ ಉಪಚುನಾವಣೆ ನೂರಾರು ಮಂದಿಯ ಪಾಲ್ಗೊಳ್ಳುವಿಕೆಯಿಂದ ಸಾಂಗವಾಗಿ ನಡೆದಿದೆ. ಕೋವಿಡ್ ನಿಯಮ ಉಲ್ಲಂಘನೆಯಾದ ಸುದ್ದಿ ಬರಲಿಲ್ಲ.

ಮಡಿಕೇರಿಯಲ್ಲಿನ ಜಿಲ್ಲಾ ಪಂಚಾಯತ್ ವಿಶಾಲ ಸಭಾಂಗಣದಲ್ಲಿ ೮೦-೧೦೦ ಮಂದಿ ಕುಳಿತಿರುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಭಾಗವಹಿಸುತ್ತಾರೆ. ಜಿಲ್ಲೆಗೆ ಸಂಬAಧಿಸಿದAತೆ ಅನೇಕ ಚರ್ಚೆಗಳೂ ಇಂತಹ ಸಭೆಗಳಲ್ಲಿ ಕೋವಿಡ್ ಬಂದ ದಿನಗಳಿಂದಲೂ ನಡೆಯುತ್ತಲೇ ಇದೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮಾಡುವುದು ಹೇಗೆ ಎಂಬ ಚರ್ಚೆ, ಸಲಹೆ, ಸೂಚನೆಗಳೂ ಈ ಮಹತ್ವದ ಸಭೆಗಳಲ್ಲಿ ನಡೆದಿದೆ. ಇಲ್ಲಿಗೆ ಕೋವಿಡ್ ನಿಯಮ ಅನ್ವಯವಾಗಿಯೇ ಇಲ್ಲ.

ಅನೇಕ ಸಂಘಸAಸ್ಥೆಗಳು ಇಂದಿಗೂ ಕೋವಿಡ್ ನಿಯಮ ಪಾಲಿಸಿಯೇ ೫೦-೬೦ ಮಂದಿಯ ಸಭೆ ನಡೆಸುತ್ತಲೇ ಇವೆ. ಜಿಲ್ಲೆಯಾದ್ಯಂತ ೫೦೦-೬೦೦ ಮಂದಿ ಪಾಲ್ಗೊಂಡ ಸಭೆಗಳು, ವಿವಾಹ ಕಾರ್ಯಕ್ರಮಗಳು, ಆರತಕ್ಷತೆ ಸೇರಿದಂತೆ ಶುಭ ಸಮಾರಂಭಗಳು ನಡೆದಿದೆ. ನಡೆಯುತ್ತಲೇ ಇದೆ.

ಆದರೆ, ಮಡಿಕೇರಿಗೆ ಮಾತ್ರ ವಿಶೇಷ ಕಾನೂನು ಎಂಬAತೆ ನಗರಸಭೆಯ ಸಭೆಯನ್ನು ನಡೆಸಲು ಸಾಧ್ಯವಾಗದಂತೆ ಕಾನೂನು ನೆಪ ಹೇಳಲಾಗುತ್ತಿದೆ.

ತ್ಯಾಜ್ಯ ವಿಲೇವಾರಿ, ಅವೈಜ್ಞಾನಿಕ ತೆರಿಗೆ ಸಮಸ್ಯೆ, ಬಸ್ ನಿಲ್ದಾಣ, ಮಡಿಕೇರಿ ಸ್ಕೆ÷್ವÃರ್, ಕಟ್ಟಡಗಳ ನಿರ್ಮಾಣ, ರಸ್ತೆ ದೀಪ, ನೀರು, ಚರಂಡಿ ವ್ಯವಸ್ಥೆ, ಲಸಿಕೆ ನೀಡಿಕೆ, ದಸರಾ ಆಚರಣೆ ಸೇರಿದಂತೆ ಮತ್ತಿತರ ವಿಚಾರಗಳೂ ಸೇರಿದಂತೆ ಅನೇಕ ವಿಚಾರಗಳನ್ನು ಮಡಿಕೇರಿ ಜನತೆ ಆಯ್ಕೆ ಮಾಡಿದ ೨೩ ಸದಸ್ಯರು ಸಭೆಯಲ್ಲಿ ಕುಳಿತು, ಚರ್ಚಿಸಿ ತೀರ್ಮಾನಿಸಬೇಕಾಗಿದೆ.

ಆದರೆ, ಕಾವೇರಮ್ಮ ಸೋಮಣ್ಣ ಅಧ್ಯಕ್ಷರಾಗಿ ೨೦೧೯ರ ಮಾರ್ಚ್ನಲ್ಲಿ ಅವಧಿ ಮುಕ್ತಾಯದ ಬಳಿಕ ಈವರೆಗೂ ಅಂದರೆ ಸರಿಸುಮಾರು ೩೦ ತಿಂಗಳ ಕಾಲ ಜಿಲ್ಲೆಯ ಕೇಂದ್ರಸ್ಥಾನದ ನಗರಸಭೆಗೇ ಅಧ್ಯಕ್ಷರೇ ಇಲ್ಲವಾಗಿದ್ದಾರೆ. ಪೌರಾಯುಕ್ತರೇ ಎಲ್ಲಾ ಹೊಣೆಯನ್ನು ನಿರ್ವಹಿಸುತ್ತಾ ಬಂದಿದ್ದಾರೆ.

ಮಡಿಕೇರಿ ನಗರಸಭೆಯ ಚುನಾವಣೆಯನ್ನು ಏಪ್ರಿಲ್ ತಿಂಗಳಿನಲ್ಲಿ ನಡೆಸಲಾಗಿದೆ. ೨೩ ವಾರ್ಡ್ಗಳಿಗೆ ಚುನಾವಣೆ ನಡೆಸಲು ಇಲ್ಲದ ಅಡ್ಡಿ ೨೩ ಜನಪ್ರತಿನಿಧಿಗಳು ಸಭೆ ಸೇರಲು ಇದೆ ಎಂದರೆ ನಿಯಮ ಹಾಸ್ಯಾಸ್ಪದ ಎನಿಸುವುದಿಲ್ಲವೇ?

ಮಡಿಕೇರಿ ಮತದಾರರಿಂದ ನಗರಸಭೆಗೆ ಆಯ್ಕೆಯಾದ ೨೩ ಸದಸ್ಯರ ಪೈಕಿ ಅನೇಕರು ಹೊಸಬ್ಬರಿದ್ದಾರೆ. ಉತ್ಸಾಹವಿದೆ. ನಗರಕ್ಕೆ ಪ್ರಯೋಜನವಾಗುವಂಥ ಕಾರ್ಯಯೋಜನೆ ರೂಪಿಸಬೇಕೆಂಬ ಚಿಂತನೆಯಿದೆ. ಆದರೆ ನಗರಸಭೆ ಸದಸ್ಯರಾಗಿ ಈ ವರ್ಷದ ಏಪ್ರಿಲ್ ೩೦ ರಂದು ಆಯ್ಕೆಯಾಗಿ ೧೩೦ ದಿನಗಳಾದರೂ ನಗರಸಭೆಯಲ್ಲಿ ಅಧಿಕೃತವಾಗಿ ಸದಸ್ಯರಾಗಿ ಕಾರ್ಯಭಾರ ಮಾಡಲು ಅಸಾಧ್ಯವಾದ ಪರಿಸ್ಥಿತಿಯಲ್ಲಿ ಈ ಸದಸ್ಯರಿದ್ದಾರೆ. ಪೌರಾಯುಕ್ತರನ್ನೇ ಎಲ್ಲಾ ವಿಚಾರಗಳಿಗೂ ಸದಸ್ಯರು ಅವಲಂಭಿಸಬೇಕಾದ ಅನಿವಾರ್ಯತೆ ಇದೆ. ಹಾಗಿದ್ದರೆ ನಾವು ಮತಪಡೆದು ಆಯ್ಕೆಯಾಗಿ ಪ್ರಯೋಜನವೇನು ಎಂಬ ಬೇಸರ ಸದಸ್ಯರಲ್ಲಿ ವ್ಯಕ್ತವಾಗುತ್ತಿದೆ. ನಗರಸಭೆಯ ೨೩ ಸದಸ್ಯರ ಪೈಕಿ ೧೬ ಸದಸ್ಯರನ್ನು ಹೊಂದುವ ಮೂಲಕ ಬಿಜೆಪಿ ನಿಚ್ಚಳ ಬಹುಮತ ಸಾಧಿಸಿ ನಗರಸಭೆಯ ಅಧಿಕಾರ ಹಿಡಿಯಲಿದೆ. ೫ ಸದಸ್ಯರು ಎಸ್.ಡಿ.ಪಿ.ಐ ಮತ್ತು ೧ ಕಾಂಗ್ರೆಸ್, ೧ ಜೆಡಿಎಸ್ ಸದಸ್ಯರನ್ನೂ ನಗರಸಭೆ ಹೊಂದಿದೆ. ಸಂಪೂರ್ಣ ಬಹುಮತದಿಂದ ಬಿಜೆಪಿಗೆ ಅಧಿಕಾರ ದೊರಕಿದ್ದರೂ ಆಡಳಿತ ನಡೆಸಲು ಮಾತ್ರ ಬಿಜೆಪಿಗೆ ಇಂದಿಗೂ ಸಾಧ್ಯವಾಗದೇ ಇರುವುದು ವಿಪರ್ಯಾಸ.

ಎರಡೂವರೆ ವಷÀðಗಳಿಂದ ಅಧ್ಯಕ್ಷ, ಉಪಾಧ್ಯಕ್ಷರನ್ನೇ ಕಾಣದ ನಗರಸಭೆ, ಸದಸ್ಯರಾಗಿ ಮತದಾರರಿಂದ ಮತಗಳಿಸಿ ಆಯ್ಕೆಯಾದರೂ ನಗರಸಭೆಯಲ್ಲಿ ಸಭೆ ಸೇರಲಾಗದ ನಿಯಮಗಳು…ಇದೆಂಥ ವಿಚಿತ್ರ?

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಪ್ರಭಾವೀ ಶಾಸಕರೇ ಜಿಲ್ಲೆಯಲ್ಲಿ ಇದ್ದರೂ ಮಡಿಕೇರಿ ನಗರಸಭೆಗೆ ಇದೆಂಥಾ ಪರಿಸ್ಥಿತಿ?