ವೀರಾಜಪೇಟೆ, ಸೆ. ೧೨: ತಾಲೂಕಿನ ಗಡಿಭಾಗದಲ್ಲಿರುವ ಕೋವಿಡ್ ೧೯ ತಪಾಸಣಾ ಕೇಂದ್ರಗಳಲ್ಲಿ ರಕ್ಷಣೆ ಹಾಗೂ ಮೂಲಸೌಕರ್ಯಗಳ ಕೊರತೆ ಇದ್ದು, ದೈನಂದಿನ ಚಟುವಟಿಕೆಗಳಿಗೆ ಸಿಬ್ಬಂದಿಗಳೂ ಹರಸಾಹಸ ಪಡುತ್ತಿದ್ದಾರೆ. ತಕ್ಷಣ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವೀರಾಜಪೇಟೆ ತಾಲೂಕು ಶಾಖೆ ಅಧ್ಯಕ್ಷ ಬಿ.ಎಸ್. ಗುರುರಾಜ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ಆದೇಶದಂತೆ ಗಡಿಭಾಗವಾದ ಕುಟ್ಟ, ಮಾಕುಟ್ಟ, ಸಿದ್ದಾಪುರ, ತಿತಿಮತಿ, ಆನೆಚೌಕೂರು ಕೇಂದ್ರದಲ್ಲಿ ಹಲವಾರು ತಿಂಗಳಿAದ ವಿವಿಧ ಇಲಾಖೆಯ ಸರ್ಕಾರಿ, ಅನುದಾನಿತ ಶಾಲಾ ನೌಕÀರರು ಹಗಲು, ರಾತ್ರಿಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿ ಯಾವುದೇ ರಕ್ಷಣೆ ಹಾಗೂ ಮೂಲಭೂತ ಸೌಕರ್ಯಗಳಿಲ್ಲ. ಶುದ್ಧ ಕುಡಿಯುವ ನೀರು ಶೌಚಾಲಯ, ವಿದ್ಯುತ್ ಮುಂತಾದ ಆಗತ್ಯತೆಗಳಿಲ್ಲ. ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಡುಪ್ರಾಣಿಗಳ ಉಪಟಳದಿಂದ ಸೂಕ್ತ ರಕ್ಷಣೆ ಇಲ್ಲದೆ ಭಯದ ವಾತವಾರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಗಲಿನಲ್ಲಿ ಮಹಿಳಾ ನೌಕರರು ಅನುಭವಿಸುವ ಕಷ್ಟ ಹೇಳತೀರದು. ಸೆಪ್ಟೆಂಬರ್ ೭ ರಂದು ತಿತಿಮತಿ ತಪಾಸಣಾ ಕೇಂದ್ರದಲ್ಲಿ ವಾಹನ ಒಂದು ಕೇಂದ್ರಕ್ಕೆ ನುಗ್ಗಿರುವ ಘಟನೆ ನಡೆದಿದೆ. ಈ ಬಗ್ಗೆ ನಾವು ಈಗಾಗಲೇ ಶಾಸಕರನ್ನು ಹಾಗೂ ತಹಶೀಲ್ದಾರ್‌ರನ್ನು ಖುದ್ದು ಭೇಟಿಯಾಗಿ ಅಗತ್ಯ ಸೌಲಭ್ಯ ಕಲ್ಪಿಸಲು ಮನವಿ ಮಾಡಿದ್ದೇವೆ. ತಕ್ಷಣ ಗಡಿಯ ಎಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಶುದ್ಧ ಕುಡಿಯುವ ನೀರು, ಸೂಕ್ತ ಶೌಚಾಲಯದ ವ್ಯವಸ್ಥೆ, ವಿದ್ಯುತ್ ಸಂಪರ್ಕ ಅಥವಾ ರಾತ್ರಿ ಜನರೇಟರ್ ವ್ಯವಸ್ಥೆ ಕಲ್ಪಸಿಕೊಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಬಿ.ಟಿ ದೇವರಾಜ್, ಖಜಾಂಚಿ ಎ.ಬಿ. ಲಲಿತ, ರಾಜ್ಯ ಪರಿಷತ್ ಸದಸ್ಯ ಈ ಸುರೇಂದ್ರ, ಸಂಘದ ಸದಸ್ಯರಾದ ಸುಬ್ರಮಣಿ ಮತ್ತು ಅಶ್ವಥ್ ಉಪಸ್ಥಿತರಿದ್ದರು.