ನಾಪೋಕ್ಲು, ಸೆ. ೧೨: ಕೊಡವ ಸಿನಿಮಾಗಳು ಮನೋರಂಜನೆ ಯೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ ಎಂದು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹೇಳಿದರು.
ನಾಪೋಕ್ಲು ಕೊಡವ ಸಮಾಜದಲ್ಲಿ ‘ನಾಡ ಪೆದ ಆಶಾ’ ಕೊಡವ ಸಿನಿಮಾ ಪ್ರದರ್ಶನಗೊಳಿಸಿ ಅವರು ಮಾತನಾಡಿದರು. ಕೊಡವ ಸಿನಿಮಾಗಳಿಂದ ಕೊಡವ ಸಂಸ್ಕೃತಿ, ಭಾಷೆ ಬೆಳೆಯುತ್ತದೆ. ಕೊಡವ ಜನಾಂಗ ಕೊಡವ ಭಾಷೆಗೆ ಹೆಚ್ಚಿನ ಒತ್ತು ನೀಡುವದರ ಮೂಲಕ ಕೊಡವಾಮೆಯನ್ನು ಬೆಳೆಸಬೇಕು ಎಂದರು. ಕೊಡವಾಮೆಯ ಅಭಿವೃದ್ಧಿಗೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ ಶ್ರಮಿಸುತ್ತಿರುವದು ಶ್ಲಾಘನೀಯ ಎಂದರು.
ನಾಪೋಕ್ಲು ಕೊಡವ ಸಮಾಜದ ಸಾಂಸ್ಕೃತಿಕ, ಕ್ರೀಡಾ ಮತ್ತು ಮನೋರಂಜನಾ ಕೂಟದ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ಮಾತನಾಡಿ, ಕೊಡವ ಸಾಹಿತ್ಯ, ಸಂಸ್ಕೃತಿ, ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲರೂ ಸಿನಿಮಾ ನೋಡುವದರ ಮೂಲಕ ಸಿನಿಮಾ ತಂಡಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಚಿತ್ರದ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ ಮಾತನಾಡಿದರು.
ವೇದಿಕೆಯಲ್ಲಿ ಚಿತ್ರದ ನಿರ್ಮಾಪಕರಾದ ಎರ್ಮಂಡ ಹರಿಣಿ ವಿಜಯ್, ಕೊಟ್ಟುಕತ್ತಿರ ಯಶೋಧ, ಇದ್ದರು. ಬಾಳೆಯಡ ಬಿಶನ್ ಪ್ರಾರ್ಥನೆ, ಕೊಡವ ಸಮಾಜ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಸ್ವಾಗತ, ಬಾಳೆಯಡ ದಿವ್ಯಾ ಮಂದಪ್ಪ ನಿರೂಪಿಸಿ, ವಂದಿಸಿದರು.