ಮಡಿಕೇರಿ, ಸೆ. ೧೨: ಭಾರತೀಯ ಜನತಾ ಪಾರ್ಟಿ ಎಸ್‌ಸಿ ಮೋರ್ಚಾ ಕೊಡಗು ಇವರ ವತಿಯಿಂದ ಜಿಲ್ಲೆಗೆ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಲಾಯಿತು. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಇದ್ದು, ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆ ಇಲ್ಲದಿರುವ ಏಕೈಕ ಜಿಲ್ಲೆ ಕೊಡಗು ಆಗಿದೆ. ಆದುದರಿಂದ ಮಡಿಕೇರಿ ನಗರದ ಸೂಕ್ತ ಸ್ಥಳದಲ್ಲಿ ಹಾಗೂ ತಾಲೂಕು ಕೇಂದ್ರಗಳ ಪ್ರಮುಖ ಸ್ಥಳಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸುವಂತೆ ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ಒದಗಿಸಿ, ೫ ಕೋಟಿ ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಿಸಿಕೊಡುವಂತೆಯೂ ಮನವಿ ಮಾಡಲಾಯಿತು. ಈ ಸಂದರ್ಭ ಎಸ್‌ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಪ್ರತಾಪ್ ಎಸ್.ಎ., ಜಿಲ್ಲಾ ಖಜಾಂಚಿ ಕೃಷ್ಣಕುಮಾರ್ ಹೆಚ್.ಆರ್., ಸೋಮವಾರಪೇಟೆ ಮಂಡಲ ಅಧ್ಯಕ್ಷ ರಾಮಕೃಷ್ಣ ಹೆಚ್.ಸಿ., ಮಡಿಕೇರಿ ಗ್ರಾಮಾಂತರ ಅಧ್ಯಕ್ಷ ಯೋಗೇಶ್ ಹೆಚ್.ಜಿ., ಸೋಮವಾರ ಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಜಿ.ಡಿ., ಜಿಲ್ಲಾ ಸಮಿತಿ ಸದಸ್ಯ ಹರೀಶ್ ಉಕ್ಕುಡ, ಸೋಮವಾರಪೇಟೆ ಮಂಡಲ ಕಾರ್ಯದರ್ಶಿ ಗಣೇಶ್ ಕರ್ಕಳ್ಳಿ ಇದ್ದರು.