ಮಡಿಕೇರಿ, ಸೆ. ೧೧: ಹೈಕೋರ್ಟ್ ವಕೀಲರಾಗಿರುವ ಮೊಟ್ಟನ ಕಾರ್ಯಪ್ಪ ರವಿಕುಮಾರ್ ಅವರ ಕಲ್ಪನೆಯ ಕೂಸಾದ ಕಾವೇರಿ ಜನ್ಮ ಭೂಮಿ ಟ್ರಸ್ಟ್ (ರಿ) ಈಗ ಹೊಸ ಇತಿಹಾಸ ಬರೆದಿದೆ. ಭಾಗಮಂಡಲದ ಚೇರಂಗಾಲದಲ್ಲಿರುವ ಈ ಟ್ರಸ್ಟ್, ಅನಾಥ ಮಕ್ಕಳನ್ನು ದತ್ತು ಪಡೆದುಕೊಂಡು ಉಚಿತ ವಸತಿ ಮತ್ತು ವಿದ್ಯಾಭ್ಯಾಸವನ್ನು ನೀಡುತ್ತಿದೆ. ಕೆಲವು ವರ್ಷಗಳ ಹಿಂದೆ ಚೇರಂಗಾಲ ಗ್ರಾಮದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರ ಸ್ಮರಣೆಗಾಗಿ ವಾರ್ ಮೆಮೋರಿಯಲ್ ಒಂದನ್ನು ಈ ಟ್ರಸ್ಟ್ ಸ್ಥಾಪಿಸಿತ್ತು.
ಇಸ್ರೋ ಸಂಸ್ಥೆ ತಯಾರಿಸಿದ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ ( PSಐಗಿ) ಅಂತರಿಕ್ಷಕ್ಕೆ ಉಪಗ್ರಹಗಳನ್ನು ಉಡ್ಡಾಯನ ಮಾಡಲು ಬಳಸಲಾಗುವ ಖ್ಯಾತ ಸ್ವದೇಶಿ ಅನ್ವೇಷಣೆ. ಇಸ್ರೋ ಅಧ್ಯಕ್ಷ ಡಾ. ಕೆ. ಸಿವನ್ ಅವರ ಸಹಕಾರದಿಂದಾಗಿ ಕಾವೇರಿ ಜನ್ಮ ಭೂಮಿ ಟ್ರಸ್ಟಿಗೆ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲಿನ ರೆಪ್ಲಿಕಾವನ್ನು ನೀಡಲಾಗಿತ್ತು. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವಿಜ್ಞಾನ ಮತ್ತು ಬಾಹ್ಯಾಕಾಶದ ವಿಷಯದಲ್ಲಿ ಆಸಕ್ತಿಯನ್ನು ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳ ಅನಾಥ ಆಶ್ರಮದ ಬಳಿ ಈ ಉಪಕರಣವನ್ನು ಪ್ರದರ್ಶನಕ್ಕಿಡಲು ಟ್ರಸ್ಟ್ ತೀರ್ಮಾನಿಸಿತ್ತು.
ತಾ. ೧೧ ರಂದು ಕಾವೇರಿ ಜನ್ಮಭೂಮಿ ಟ್ರಸ್ಟಿನವರು ಆಯೋಜಿಸಿದ್ದ ಸರಳ ಸಮಾರಂಭದಲ್ಲಿ (ಮೊದಲ ಪುಟದಿಂದ) ಮಕ್ಕಳ ತಜ್ಞರಾದ ಮೇಜರ್ ಡಾ. ಕುಶ್ವಂತ್ ಕೋಳಿಬೈಲುರವರು ರಿಬ್ಬನ್ ಕತ್ತರಿಸುವುದರ ಮೂಲಕ ಚೇರಂಗಾಲದಲ್ಲಿ ಸ್ಥಾಪಿಸಿರುವ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲಿನ ರೆಪ್ಲಾಕಾವನ್ನು ಲೋಕಾರ್ಪಣೆ ಮಾಡಿದರು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗಮಂಡಲ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಪೊಲೀಸ್ ಅಧಿಕಾರಿ ಡಿವೈಎಸ್‌ಪಿ ಮುರಳೀಧರ್ ಮತ್ತು ಕೊಡಗು ಗೌಡ ಪೆಡರೇಷನ್ ಅಧ್ಯಕ್ಷ ಸೂರ್ತಲೆ ಸೋಮಣ್ಣನವರು ಭಾಗವಹಿಸಿದ್ದರು.
ಕೋವಿಡ್ ನಿಯಮಾವಳಿಗಳಿದ್ದ ಕಾರಣ ಸರಳವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹೊಸೂರು ಸತೀಶ್ ಕುಮಾರವರು ಮೊಟ್ಟನ ರವಿಕುಮಾರ್ ಅವರಿಗಿರುವ ಹುಟ್ಟೂರಿನ ಬಗೆಗಿರುವ ಕಾಳಜಿ ಮತ್ತು ಕ್ರಿಯಾಶೀಲತೆಯನ್ನು ಶ್ಲಾಘಿಸಿದರು. ರೈತಾಪಿ ಕುಟುಂಬದಲ್ಲಿ ಹುಟ್ಟಿದ ಮೊಟ್ಟನ ರವಿಕುಮಾರ್‌ರವರು ಮೊದಲಿಗೆ ವಾರ್ ಮೆಮೋರಿಯಲ್ ಸ್ಥಾಪಿಸಿ, ನಂತರ ಇಸ್ರೋದ ಬಾಹ್ಯಾಕಾಶ ಉಪಕರಣವನ್ನು ಗ್ರಾಮೀಣ ಪ್ರದೇಶವಾದ ತಮ್ಮ ಹುಟ್ಟೂರಿಗೆ ತಂದಿರುವುದರಿAದ ‘ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್’ ಎಂಬ ಅವರ ಧ್ಯೇಯ ಯುವ ಸಮುದಾಯಕ್ಕೆ ಆದರ್ಶಪ್ರಾಯವಾಗಲೆಂದು ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಅಭಿಪ್ರಾಯಪಟ್ಟರು. ವಾರ್ ಮೆಮೋರಿಯಲ್ಲಿಗೆ ಗೌರವ ವಂದನೆಯನ್ನು ಸಲ್ಲಿಸುವುದರ ಜೊತೆಗೆ ಅತಿಥಿಗಳಿಂದ ಸಸಿಗಳನ್ನು ನೆಡಲಾಯಿತು.