ಕಣಿವೆ, ಸೆ. ೮: ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಸಾರ್ವಜನಿಕ ಹಣವನ್ನು ಹೇಗೆಲ್ಲಾ ಪೋಲು ಮಾಡುತ್ತಾರೆ ಎಂಬುದಕ್ಕೆ ಕುಶಾಲನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಕಟ್ಟಡ ಸಾಕ್ಷಿಯಾಗಿದೆ.

ಸುಮಾರು ೫೦ ಲಕ್ಷ ರೂಪಾಯಿಗಳಿಗೂ ಅಧಿಕ ಹಣ ವ್ಯಯಿಸಿ ನೂತನವಾಗಿ ನಿರ್ಮಿಸಿದ್ದ ಸರ್ಕಾರಿ ಆಯುರ್ವೇದ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಆರು ತಿಂಗಳು ಕೂಡ ಕಳೆದಿಲ್ಲ. ಅಷ್ಟರಲ್ಲಿ ಮತ್ತೆ ಕಟ್ಟಡದ ಮುಂಬದಿಯಲ್ಲಿ ನಿರ್ಮಿಸಿದ್ದ ಸ್ಟೇರ್‌ಕೇಸ್ ಕಟ್ಟಡವನ್ನು ನೆಲಸಮಗೊಳಿಸಿ ಮತ್ತೆ ಹೊಸದಾಗಿ ಕಟ್ಟಲು ಕಾಮಗಾರಿ ಆರಂಭಿಸಲಾಗಿದೆ. ಆಯುರ್ವೇದ ಆಸ್ಪತ್ರೆಯ ಮೊದಲ ಮಹಡಿಯ ಕಟ್ಟಡಕ್ಕೆ ತಳ್ಳುವ ಗಾಡಿಗಳಿಂದ ಸಾರ್ವಜನಿಕರನ್ನು ಅಥವಾ ರೋಗಿಗಳನ್ನು ಒಯ್ಯಲು ಸ್ಟೇರ್‌ಕೇಸ್‌ಅನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿತ್ತು. ಅಂದರೆ ತೀರಾ ಕಡಿದಾದ ಸ್ಥಿತಿಯಲ್ಲಿ ಈ ಸ್ಟೇರ್‌ಕೇಸ್ ನಿರ್ಮಿಸಲಾಗಿತ್ತು. ಕಟ್ಟಡದ ಉದ್ಘಾಟನೆಯ ದಿನವೇ ಶಾಸಕ ಅಪ್ಪಚ್ಚು ರಂಜನ್ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಅವರುಗಳು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರುಗಳು ನಿರ್ಮಿಸಿದ್ದ ಈ ಅವೈಜ್ಞಾನಿಕ ಸ್ಟೇರ್‌ಕೇಸ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಸಾಮಾನ್ಯವಾಗಿ ಆರೋಗ್ಯವಂತರೂ ಕೂಡ ಸ್ಟೇರ್‌ಕೇಸ್‌ನಲ್ಲಿ ನಡೆಯಲು ಅಸಾಧ್ಯ ಹಾಗೂ ಭಯಾನಕವಾದ ಸ್ಥಿತಿಯಲ್ಲಿ ಅದನ್ನು ನಿರ್ಮಿಸಲಾಗಿತ್ತು. ಇದಕ್ಕಾಗಿ ಲಕ್ಷಾಂತರ ರೂಗಳ ಕಬ್ಬಿಣ, ಸಿಮೆಂಟ್, ಮರಳು ಬಳಸಲಾಗಿತ್ತು. ಆದರೆ ಅದು ಅನುಪಯುಕ್ತವಾದ್ದರಿಂದ ಇದೀಗ ಅದನ್ನು ಒಡೆದು ತೆಗೆದು ಬದಲೀ ಸ್ಟೇರ್‌ಕೇಸ್ ನಿರ್ಮಿಸಲು ಇಂಜಿನಿಯರುಗಳು ಮುಂದಾಗಿದ್ದಾರೆ. ಇದೀಗ ಹಳೆಯ ಅವೈಜ್ಞಾನಿಕವಾಗಿದ್ದ ಸ್ಟೇರ್‌ಕೇಸ್ ಜಾಗದಲ್ಲಿ ಆಯುರ್ವೇದ ಆಸ್ಪತ್ರೆಯ ಮುಂಬದಿಗೆ ಮತ್ತೆ ಎರಡು ಪಿಲ್ಲರ್ ಅಳವಡಿಸಲು ಕಾಮಗಾರಿ ಆರಂಭಿಸಲಾಗಿದ್ದು, ಸ್ಟೇರ್‌ಕೇಸನ್ನು ಕಟ್ಟಡದ ಮಗ್ಗುಲಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಹಾಯಕ ಇಂಜಿನಿಯರ್ ಫಯಾಜ್ ಅಹ್ಮದ್ ತಿಳಿಸಿದ್ದಾರೆ.

ಅಂದರೆ ಸರ್ಕಾರದ ಹಣವನ್ನು ಹೀಗೂ ಪೋಲು ಮಾಡುತ್ತಾರಾ? ಇದಕ್ಕೆ ಹೊಣೆ ಯಾರು? ಅವೈಜ್ಞಾನಿಕವಾಗಿ ಸ್ಟೇರ್‌ಕೇಸ್ ನಿರ್ಮಿಸಿದ ಅಧಿಕಾರಿಗಳಿಂದ ಇದರ ವೆಚ್ಚವನ್ನು ಭರಿಸಬೇಕೆಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಇನ್ನಾದರೂ ಇಂಜಿನಿಯರುಗಳು ದೂರದೃಷ್ಟಿತ್ವದಿಂದ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಲಿ ಎಂದು ಸಾರ್ವಜನಿಕರು ತಿಳಿಹೇಳಿದ್ದಾರೆ.

- ಕೆ.ಎಸ್. ಮೂರ್ತಿ