ಗೋಣಿಕೊಪ್ಪಲು, ಸೆ. ೮: ಕಂದಾಯ, ಸರ್ವೆ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಅವ್ಯವಹಾರಗಳು ನಡೆಯುತ್ತಿರುವುದು ಹೊಸತೇನು ಅಲ್ಲ. ಇದೀಗ ಈ ಇಲಾಖೆಯಲ್ಲಿ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಮಹಿಳೆಯೋರ್ವರ ಭೂಮಿ ಖಾತೆಯನ್ನು ಅವರಿಗೆ ಅರಿವಿಗೆ ಬಾರದ ರೀತಿಯಲ್ಲಿ ಮತ್ತೊಬ್ಬರಿಗೆ ವರ್ಗಾಯಿಸಿ ಖಾತೆ ಮಾಡಿಕೊಟ್ಟಿರುವ ಪ್ರಕರಣ ವರದಿಯಾಗಿದೆ. ಕಂದಾಯ, ಸರ್ವೆ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತರ ಖಾತೆಗಳು ಮತ್ತೊಬ್ಬರಿಗೆ ವರ್ಗಾವಣೆಯಾಗುತ್ತಿವೆ.
ಶ್ರೀಮಂಗಲ ಹೋಬಳಿಯ ಕುರ್ಚಿ ಗ್ರಾಮದ ರೈತ ಮಹಿಳೆ ಈ ಪ್ರಕರಣವನ್ನು ಬಯಲಿಗೆ ತಂದಿದ್ದು, ಇದೀಗ ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಸಾಕ್ಷಿಯಾಗಿದೆ. ಕಂದಾಯ ಇಲಾಖೆಯಲ್ಲಿ ರೈತರ ಖಾತೆಗಳ ವರ್ಗಾವಣೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಕಚೇರಿಗಳಿಗೆ ವರ್ಷಾನುಗಟ್ಟಲೆ ಅಲೆದಾಡಿದರೂ ಕೆಲಸಗಳು ಆಗುತ್ತಿಲ್ಲ. ದಿನಕ್ಕೊಂದು ದಾಖಲೆಗಳು ಬೇಕೆಂದು ಅಧಿಕಾರಿಗಳು ರೈತರನ್ನು ಅಲೆದಾಡಿಸುವುದು ಮಾಮೂಲಿಯಾಗಿದೆ. ಆದರೆ ಈ ಪ್ರಕರಣದಲ್ಲಿ ರೈತರ ಗಮನಕ್ಕೆ ಬಾರದ ರೀತಿಯಲ್ಲಿ ಒಬ್ಬರ ಭೂಮಿಖಾತೆ ಮತ್ತೊಬ್ಬರಿಗೆ ವರ್ಗಾವಣೆಯಾಗಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕೊಡಗು ಕಾಫಿ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಅವರ ೩ ಎಕರೆ ಆಸ್ತಿಯನ್ನು ತಮ್ಮ ಹಿರಿಯ ಮಗಳಾದ ಬೊಳ್ಳಮ್ಮ ಎಂಬವರಿಗೆ ದಾನದ ರೂಪದಲ್ಲಿ ೧೮.೧೧.೨೦೦೯ ರಂದು ಪೊನ್ನಂಪೇಟೆಯ ನೋಂದಣಾಧಿಕಾರಿಯವರ ಕಚೇರಿಯಲ್ಲಿ ನೋಂದಾಯಿಸಿ ನೀಡಿದ್ದರು. ನಂತರ ಈ ಆಸ್ತಿಯ ಮೇಲೆ ಬೊಳ್ಳಮ್ಮ ಅವರು ಬ್ಯಾಂಕಿನಿAದ ಸಾಲ ಪಡೆದಿದ್ದರು. ವರ್ಷಂಪ್ರತಿ ಬ್ಯಾಂಕಿನಲ್ಲಿ ಈ ಆಸ್ತಿಯ ಮೇಲೆ ಸಾಲ ಪಡೆಯುವುದು, ನವೀಕರಿಸುವುದು ಮಾಡುತ್ತಾ ಬಂದಿದ್ದರು. ಕಳೆದ ಒಂದು ತಿಂಗಳ ಹಿಂದೆ ಈ ಆಸ್ತಿಯ ಮೇಲೆ ಮತ್ತಷ್ಟು ಸಾಲ ಪಡೆಯಲು ಬೊಳ್ಳಮ್ಮ ಮುಂದಾಗಿದ್ದರು.
ಈ ಸಂಬAಧ ಅಗತ್ಯ ದಾಖಲೆ ಪಡೆಯಲು ಪೊನ್ನಂಪೇಟೆೆಯ ಉಪ ನೋಂದಣಾಧಿಕಾರಿಗಳ ಕಚೇರಿಗೆ ತೆರಳಿ ದಾಖಲೆ ಪರಿಶೀಲಿಸಿದ ವೇಳೆ ತಮ್ಮ ಹೆಸರಿನಲ್ಲಿದ್ದ ಆಸ್ತಿಯ ಸ್ವಲ್ಪ ಭಾಗ ಮತ್ತೊಬ್ಬರ ಹೆಸರಿಗೆ ವರ್ಗಾವಣೆ ಆಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಕಂದಾಯ ಇಲಾಖೆಯಲ್ಲಿ ತಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ಆಸ್ತಿಯು ಮತ್ತೊಬ್ಬರ ಪಾಲಾಗಿರುವುದಾಗಿ ಅಧಿಕಾರಿಗಳು ಮಾಹಿತಿ ಹೊರಹಾಕಿದ್ದಾರೆ. ಕೂಡಲೇ ಜಾಗೃತಗೊಂಡ ಬೊಳ್ಳಮ್ಮ ತಾಲೂಕು ತಹಶೀಲ್ದಾರರಿಗೆ ದೂರು ನೀಡಿದ್ದಾರೆ. ಕಂದಾಯ ಇಲಾಖೆಯಲ್ಲಿ ವ್ಯಾಪಕ ಅವ್ಯವಹಾರಗಳು ನಡೆಯುತ್ತಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಆಧಾರ್‌ನಿಂದ ಬಯಲಾಯಿತು ಸತ್ಯ...!
ಮೂರು ಎಕರೆ ಭೂಮಿಯನ್ನು ಹೊಂದಿರುವ ಬೊಳ್ಳಮ್ಮನವರ ಆಸ್ತಿಯನ್ನು ಕಬಳಿಸಲು ತೋಟದ ಸಮೀಪವಿರುವ ಮತ್ತೊಬ್ಬ ರೈತರು ಹವಣಿಸುತ್ತಿದ್ದರು. ಈ ಕಾರ್ಯಕ್ಕೆ ವೀರಾಜಪೇಟೆಯ ಕಂದಾಯ ಕಚೇರಿಯ ಸುತ್ತಾಮುತ್ತ ವ್ಯವಹಾರ ಕುದುರಿಸುವ ಮಧ್ಯವರ್ತಿ ಓರ್ವ ಮುಂದೆ ಬಂದಿದ್ದಾನೆ. ಮಹಿಳೆಯ ಆಧಾರ್‌ಕಾರ್ಡ್ ನೀಡಿದರೆ ವ್ಯವಹಾರ ಮಾಡಿಕೊಡುವುದಾಗಿ ಭರವಸೆ ನೀಡಿದ್ದ. ಈ ಹಿನ್ನೆಲೆ ಬೊಳ್ಳಮ್ಮ ಅವರನ್ನು ತೋಟದ ಸಮೀಪ ಇರುವ ಮತ್ತೊಬ್ಬ ರೈತನು ಆಧಾರ್‌ಕಾರ್ಡ್ ಬೇಕೆಂದು ಬೇಡಿಕೆ ಸಲ್ಲಿಸಿದ್ದ.
ಆದರೆ ಬೊಳ್ಳಮ್ಮ ಅವರು ಕಾರಣವಿಲ್ಲದೆ ಆಧಾರ್ ಕಾರ್ಡ್ ನೀಡಲು ನಿರಾಕರಿಸಿದ್ದರು. ನಂತರ ಈ ರೈತ ಬೇರೆಮಾರ್ಗ ಅನುಸರಿಸಿ ಬೊಳ್ಳಮ್ಮ ವ್ಯವಹಾರ ನಡೆಸುತ್ತಿರುವ ಬ್ಯಾಂಕಿಗೆ ತೆರಳಿ ಅಲ್ಲಿರುವ ನೌಕರನನ್ನು ಮನವೊಲಿಸಿ ಆಕೆಯ ಆಧಾರ್ ಪ್ರತಿ ನೀಡುವಂತೆ ಕೇಳಿದ್ದರು. ಆದರೆ ಬ್ಯಾಂಕ್ ನೌಕರ ವiತ್ತೊಬ್ಬರ ಖಾತೆಯ ದಾಖಲೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ವಾಪಸ್ ಕಳುಹಿಸಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಬೊಳ್ಳಮ್ಮನವರಿಗೆ ತಮ್ಮ ಆಸ್ತಿಯ ವಿಚಾರದಲ್ಲಿ ಏನೋ ಅವ್ಯವಹಾರ ನಡೆದಿರಬಹುದು ಎಂಬ ಅನುಮಾನ ಬಂದಿದೆ. ಈ ಬಗ್ಗೆ ಪರಿಶೀಲಿಸಿದ ಸಂದರ್ಭ ತಮ್ಮ ಆಸ್ತಿಯು ಮತ್ತೊಬ್ಬರ ಪಾಲಾಗಿರುವುದು ಬೆಳಕಿಗೆ ಬಂದಿದೆ.
- ಹೆಚ್.ಕೆ. ಜಗದೀಶ್ ಆಸ್ತಿಯ ಮೇಲೆ ಕಣ್ಣಿಟ್ಟಿದ್ದರು
೨೦೦೯ ರಿಂದ ತನ್ನ ತಂದೆಯವರು ದಾನವಾಗಿ ನೀಡಿರುವ ಆಸ್ತಿಯಲ್ಲಿ ತೋಟ ಮಾಡಿಕೊಂಡು ಜೀವನ ನಡೆಸುತ್ತಿರುವೆ. ನನ್ನ ಆಸ್ತಿಯ ಪಕ್ಕದಲ್ಲಿರುವ ಮತ್ತೊಬ್ಬರು ನನ್ನ ಆಸ್ತಿಯ ಮೇಲೆ ಕಣ್ಣಿಟ್ಟಿದ್ದರು. ನಾನು ಆಸ್ತಿ ಮಾರಾಟಕ್ಕೆ ಅವಕಾಶ ನೀಡಲಿಲ್ಲ. ಆದರೆ ಇವರು ಬೇರೆ ಮಾರ್ಗದಲ್ಲಿ ಆಸ್ತಿಯನ್ನು ನಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ವರ್ಗಾಯಿಸಿಕೊಂಡಿದ್ದಾರೆ. ಈ ಕಾರ್ಯಕ್ಕೆ ಮಧ್ಯವರ್ತಿಗಳು ಶಾಮೀಲಾಗಿದ್ದಾರೆ. ಇಂತಹ ಪ್ರಕರಣಗಳಿಂದ ಕುಟುಂಬಗಳ ನಡುವೆ ವೈಮನಸ್ಸು ತರುವ ಮೂಲಕ ಮುಂದಿನ ಅನಾಹುತಕ್ಕೆ ಕಾರಣರಾಗುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಯಾವುದೇ ದಾಖಲೆ ಇಲ್ಲದೇ ಈ ರೀತಿಯ ಆಸ್ತಿ ಮತ್ತೊಬ್ಬರ ಪಾಲಾಗಲು ಕಾರಣವೇನು..? ಎಂದು ಬಹಿರಂಗವಾಗಬೇಕಾಗಿದೆ. ಈ ನಿಟ್ಟಿನಲ್ಲಿ ವಿವಿಧ ಸಂಘ-ಸAಸ್ಥೆಗಳ ಸಹಕಾರ ಪಡೆದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುವುದು. ಅಗತ್ಯವಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು.
- ಎ.ಟಿ. ಬೊಳ್ಳಮ್ಮ, ನೊಂದ ರೈತ ಮಹಿಳೆ, ಕುರ್ಚಿ ಗ್ರಾಮ.
ಸರ್ವೆಗೆ ಸೂಚಿಸಲಾಗಿದೆ
ನೊಂದ ಅರ್ಜಿದಾರರು ಈ ಬಗ್ಗೆ ಲಿಖಿತ ದೂರು ನೀಡಿದ್ದಾರೆ. ಅರ್ಜಿಯನ್ನು ಪರಿಶೀಲನೆ ನಡೆಸಿ, ಸರ್ವೆಕಾರ್ಯ ನಡೆಸಲು ಸೂಚನೆ ನೀಡಲಾಗಿದೆ. ಈ ವಿಚಾರದಲ್ಲಿ ಇಲಾಖೆಯ ಸಿಬ್ಬಂದಿಗಳಿAದ ದುರುದ್ದೇಶ ಪೂರಕವಾಗಿ ಲೋಪ ಕಂಡುಬAದಲ್ಲಿ ಅಂತಹವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ನ್ಯಾಯಯುತವಾಗಿ ಮಹಿಳೆಗೆ ಸಿಗಬೇಕಾದ ಆಸ್ತಿಯನ್ನು ಸರ್ವೆ ನಡೆಸಿ ಇವರ ಸುಪರ್ಧಿಗೆ ನೀಡುವ ವ್ಯವಸ್ಥೆ ಮಾಡಲಾಗುವುದು.
- ಯೋಗಾನಂದ್, ತಹಶೀಲ್ದಾರ್, ವೀರಾಜಪೇಟೆ ತಾಲೂಕು.
ಹೋರಾಟ ಅನಿವಾರ್ಯ
ರೈತರ ಪರವಾಗಿ ಇಲಾಖೆಯ ವಿರುದ್ಧ ಅನೇಕ ಹೋರಾಟಗಳನ್ನು ಈ ಹಿಂದೆ ಮಾಡಲಾಗಿತ್ತು. ಸಾಕಷ್ಟು ಪ್ರಕರಣಗಳಲ್ಲಿ ನೊಂದ ರೈತರಿಗೆ ನ್ಯಾಯ ಕೊಡಿಸಲಾಗಿತ್ತು. ಆದರೆ ಇಂತಹ ಅವ್ಯವಹಾರಗಳು ಅಂದಿನ ದಿನಗಳಲ್ಲಿ ಕಂಡು ಬರಲಿಲ್ಲ. ಇದೀಗ ಯವುದೇ ದಾಖಲೆ ಇಲ್ಲದೇ ರೈತರ ಆಸ್ತಿಗಳು ಮತ್ತೊಬ್ಬರಿಗೆ ಪರಬಾರೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಂದಾಯ ಇಲಾಖೆಯಲ್ಲಿನ ಕೆಲವು ಸಿಬ್ಬಂದಿಗಳು ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವುದರಿಂದ ಹಾಗೂ ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಯಿಂದಾಗಿ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆ ಸಂಘ-ಸAಸ್ಥೆಗಳು ಎಚ್ಚೆತ್ತುಕೊಂಡು ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಟ ಹಮ್ಮಿಕೊಳ್ಳಬೇಕು.
- ಅಜ್ಜಮಾಡ ಶಂಕರು ನಾಚಪ್ಪ, ಮಾಜಿ ಜಿಲ್ಲಾಧ್ಯಕ್ಷ, ಕೊಡಗು ಕಾಫಿ ಬೆಳೆಗಾರರ ಒಕ್ಕೂಟ