ಕಣಿವೆ, ಸೆ. ೨: ಪ್ರಮುಖ ಪ್ರವಾಸಿ ತಾಣ ಹಾರಂಗಿ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಕುಶಾಲನಗರ-ಹಾರಂಗಿ ಹೆದ್ದಾರಿಯಲ್ಲಿ ಬೀಡಾಡಿ ದನಗಳ ಹಾವಳಿ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿವೆ.

ಹತ್ತಾರು ಸಂಖ್ಯೆಯಲ್ಲಿನ ಈ ಜಾನುವಾರುಗಳು ನಿತ್ಯವೂ ಮೇಯಲು ಅಲ್ಲಿನ ಅತ್ತೂರು ಅರಣ್ಯವನ್ನು ಅವಲಂಬಿಸಿವೆ. ಜೊತೆಗೆ ಮೇವಿನಲ್ಲಿ ಬದಲಾವಣೆ ಬೇಕೆಂದಲ್ಲಿ ಹಾರಂಗಿ ಜಲಾಶಯದ ಒಳಾವರಣಕ್ಕೆ ತೆರಳಿ ಅಲ್ಲೇ ವಾರಗಟ್ಟಲೇ ಠಿಕಾಣಿ ಹೂಡುತ್ತವೆ.

ಅತ್ತ ಆನೆಕಾಡು ಅರಣ್ಯದ ಬಳಿಯೂ ಇದೇ ರೀತಿಯ ಬೀಡಾಡಿ ದನಗಳು ಕುಶಾಲನಗರ ಮಡಿಕೇರಿ ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿವೆ. ಹಾಗೆಯೇ ಗುಡ್ಡೆಹೊಸೂರಿನಿಂದ ದುಬಾರೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಕೂಡ ಈ ಸಮಸ್ಯೆಯಿಂದ ಹೊರತಾಗಿಲ್ಲ. ಈ ಜಾನುವಾರುಗಳು ವಾಹನ ಸವಾರರ ಸುಗಮ ವಾಹನ ಸಂಚಾರಕ್ಕೆ ಕಿರಿಕಿರಿ ಉಂಟುಮಾಡುವುದಕ್ಕಿAತಲೂ ವೇಗವಾಗಿ ಸಾಗುವ ವಾಹನಗಳಿಗೆ ಸಿಲುಕಿ ಸಾಕಷ್ಟು ನೋವುಂಡ ಉದಾಹರಣೆಗಳು ಇವೆ. ಕೆಲವೊಂದು ವಾಹನಗಳ ಡಿಕ್ಕಿಗೆ ಸಿಲುಕಿ ಸ್ಥಳದಲ್ಲೇ ಅಸುನೀಗಿರುವುದೂ ಕೂಡ ಉಂಟು. ಹಾಗಿದ್ದರೂ ಕೂಡ ಈ ಜಾನುವಾರುಗಳ ಪಾಲಕರು ತಮ್ಮ ದನಗಳ ಬಗ್ಗೆ ಮರುಕವೂ ಇಲ್ಲ. ಮಮತೆಯೂ ಇಲ್ಲದಂತೆ ವರ್ತಿಸುತ್ತಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿ, ಆಡಳಿತ ಪಂಚಾಯಿತಿ ವ್ಯಾಪ್ತಿಯಲ್ಲಿ ದನಗಳ ದೊಡ್ಡಿ ನಿರ್ಮಿಸಿದಲ್ಲಿ ಬೀಡಾಡಿ ದನಗಳನ್ನು ತಂದು ಕೂಡಿಟ್ಟು ಅವುಗಳಿಗೆ ದಾನಿಗಳ ಸಹಕಾರದಿಂದ ಒಂದಿಷ್ಟು ಹುಲ್ಲು ನೀರಿನ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗುತ್ತದೆ.

ಇತ್ತ ಜಾನುವಾರುಗಳ ಪಾಲಕರು ನಿಗದಿತ ಅವಧಿಯೊಳಗೆ ಬಂದು ಜಾನುವಾರುಗಳನ್ನು ದಂಡ ಕಟ್ಟಿ ಬಿಡಿಸಿಕೊಳ್ಳದಿದ್ದರೆ ಅವುಗಳನ್ನು ಪಾಲಕರಿಗೆ ಹರಾಜು ಮಾಡಿದರೆ ಯಾರಾದರೂ ಕೊಂಡೊಯ್ದು ಸಾಕುತ್ತಾರೆ. ಈ ಬಗ್ಗೆಯೂ ಪಂಚಾಯಿತಿ ಆಡಳಿತ ಯೋಜನೆ ರೂಪಿಸಬಹುದಾ...? ಅವಲೋಕನ ಮಾಡಿದರೆ ಉತ್ತಮ.

- ಕೆ.ಎಸ್. ಮೂರ್ತಿ