ಕಣಿವೆ, ಸೆ. ೨: ವಾಹನಗಳಿರಲಿ ಪಾದಚಾರಿಗಳು ಕೂಡ ತೆರಳಲು ಸಾಧ್ಯವಾಗದ ರಸ್ತೆಗಳು, ಚರಂಡಿ ಗಳಿಲ್ಲದೆ ದಾರಿಯ ಮಧ್ಯೆಯೇ ಹರಿದಿರುವ ತ್ಯಾಜ್ಯ ನೀರು, ದಾರಿ ಕಾಣದಷ್ಟು ಎತ್ತರಕ್ಕೆ ಬೆಳೆದು ನಿಂತಿರುವ ಗಿಡ ಗಂಟಿಗಳು, ದೀಪಗಳೇ ಇಲ್ಲದ ಬೀದಿಯ ಕಂಬಗಳು!

ಇದು ಕೂಡ್ಲೂರು ನವಗ್ರಾಮದಲ್ಲಿ ಕಂಡು ಬರುತ್ತಿರುವ ಸಾಲು ಸಾಲು ಸಮಸ್ಯೆಗಳ ರಾಶಿ. ಕೊಡಗು ಜಿಲ್ಲೆಯಲ್ಲಿನ ಏಕೈಕ ಕೈಗಾರಿಕಾ ಘಟಕವಿರುವ ಕುಶಾಲನಗರದ ಕೂಡ್ಲೂರು ಕೈಗಾರಿಕ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಸ್ಥಳೀಯ ನೂರಾರು ಮಂದಿ ನಿರ್ಗತಿಕರಿಗೆ ನಿವೇಶನಗಳನ್ನು ನೀಡಲು ಕೈಗಾರಿಕ ಪ್ರದೇಶದ ಎಡ ಬದಿಯಲ್ಲಿನ ಗುಡ್ಡ ಪ್ರದೇಶದಲ್ಲಿ ಕಳೆದ ೨೦ ವರುಷಗಳ ಹಿಂದೆ ಬಡಾವಣೆ ನಿರ್ಮಿಸಲಾಗಿತ್ತು. ಗುಡ್ಡದಲ್ಲಿ ನಿರ್ಮಿಸಿದ್ದ ಬಡಾವಣೆಗೆ ನವಗ್ರಾಮ ಎಂದು ಹೆಸರಿಟ್ಟ ಸ್ಥಳೀಯ ಗ್ರಾಮ ಪಂಚಾಯಿತಿ ಇಲ್ಲಿನ ನಿವಾಸಿಗಳಿಗೆ ಮನೆಗಳನ್ನು ಕೂಡ ಕಟ್ಟಿ ಕೊಟ್ಟಿತ್ತು.

ಆದರೆ ಆ ಮನೆಗಳಿಗೆ ಮುಖ್ಯ ರಸ್ತೆಯಿಂದ ಒಳ ತೆರಳಲು ಸೂಕ್ತವಾದ ಉಪ ರಸ್ತೆಗಳು, ಚರಂಡಿಗಳು ಹಾಗೂ ಬೀದಿ ದೀಪಗಳನ್ನು ಅಳವಡಿಸುವಲ್ಲಿ ಕಳೆದ ೨೦ ವರ್ಷಗಳಿಂದಲೂ ಸ್ಥಳೀಯ ಪಂಚಾಯಿತಿಗೆ ಏಕೆ ಸಾಧ್ಯವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಬಡಾವಣೆಯ ಕೆಲವು ರಸ್ತೆಗಳಲ್ಲಿ ಸೂಕ್ತ ಚರಂಡಿ ಇಲ್ಲದ ಕಾರಣ ಮನೆಗಳ ತ್ಯಾಜ್ಯ ನೀರು ಹಾಗೂ ಮಳೆಯ ನೀರು ಇರುವ ಹರುಕು ಮುರುಕು ರಸ್ತೆಯಲ್ಲಿಯೇ ಹರಿಯುತ್ತಿದ್ದು ಇಡೀ ಪರಿಸರ ಕಲುಷಿತಗೊಂಡಿದೆ. ಬಡಾವಣೆಗಳ ಕೆಲವೆಡೆಗಳಲ್ಲಿ ಕಡಿದಾದ ಗುಡ್ಡಗಳಲ್ಲಿ ಅವೈಜ್ಞಾನಿಕವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಅಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಬಹಳಷ್ಟು ಮಂದಿ ಕೂಲಿ ಕಾರ್ಮಿಕ ಫಲಾನುಭವಿಗಳು ರಸ್ತೆ ಚರಂಡಿಗಳಿಲ್ಲದೇ ಇಂದಿಗೂ ಸಂಕಷ್ಟದಲ್ಲಿಯೇ ದಿನಗಳೆಯುತ್ತಿದ್ದಾರೆ.

ಪಂಚಾಯಿತಿ ವತಿಯಿಂದ ಇಲ್ಲಿನ ಮಂದಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕಿದೆ.

ಈ ಸಂದರ್ಭ ಪತ್ರಿಕೆಗೆ ಮಾಹಿತಿ ನೀಡಿದ ಸ್ಥಳೀಯ ಪಂಚಾಯಿತಿ ಸದಸ್ಯ ಷಂಶುದ್ದೀನ್ ಪಂಚಾಯಿತಿ ವತಿಯಿಂದ ಸಿಗುವ ಅನುದಾನಕ್ಕೆ ಅನುಗುಣವಾಗಿ ಸಾಧ್ಯವಾದಷ್ಟು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಮುಂದಾಗುವುದಾಗಿ ತಿಳಿಸಿದ್ದಾರೆ.

- ಮೂರ್ತಿ