ಮಡಿಕೇರಿ, ಸೆ. ೧: ಕೊಡಗು ಜಿಲ್ಲೆಯಾದ್ಯಂತ ವಾಹನಗಳ ನೋಂದಣಿ ತೂಕ ೧೬,೨೦೦ ಕೆ.ಜಿ.ಗೂ ಅಧಿಕ ನೋಂದಣಿ ತೂಕದ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿತ್ತು. ಆದರೆ ಕೊಡಗು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಮತ್ತು ಕಟ್ಟಡ ಕಾಮಗಾರಿಗಾಗಿ ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯಲು ಭಾರೀ ವಾಹನಗಳ ಸಂಚಾರವನ್ನು ಪೂರ್ಣವಾಗಿ ನಿಷೇಧಿಸಿದಲ್ಲಿ, ಕೃಷಿ ಹಾಗೂ ಕಟ್ಟಡ ಕಾರ್ಯಗಳಿಗೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸಹ ಕಡಿಮೆಯಾಗಿರುವುದರಿಂದ ಈಗಾಗಲೇ ಹೊರಡಿಸಿದ್ದ ಆದೇಶವನ್ನು ತಿದ್ದುಪಡಿ ಮಾಡಿ ಮಡಿಕೇರಿಯಿಂದ ಸಂಪಾಜೆ ಮಾರ್ಗದಲ್ಲಿ ಮತ್ತು ಮಡಿಕೇರಿ-ಕುಟ್ಟ ರಸ್ತೆಯಲ್ಲಿ ಮಡಿಕೇರಿಯಿಂದ ಚೆಟ್ಟಳ್ಳಿಯವರೆಗೆ ಮಾತ್ರ ತಾ. ೧೫ರ ವರೆಗೆ ಭಾರೀ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.