ಗೋಣಿಕೊಪ್ಪ ವರದಿ, ಸೆ. ೧: ಗೋಣಿಕೊಪ್ಪದಲ್ಲಿ ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸುವ ನಿರ್ಣಯ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ. ಚೇತನ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸರ್ವ ಸದಸ್ಯರು ಈ ಬಗ್ಗೆ ಒಮ್ಮತದ ನಿರ್ಧಾರ ತೆಗೆದುಕೊಂಡರು.
ದಕ್ಷಿಣ ಕೊಡಗು ಭಾಗದ ಮುಖ್ಯ ಪಟ್ಟಣವಾಗಿರುವ ಗೋಣಿಕೊಪ್ಪ ಹಲವು ವರ್ಷಗಳಿಂದ ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಸಾರ್ವಜನಿಕವಾಗಿ ಕೂಡ ಈ ಬಗ್ಗೆ ಒತ್ತಾಯ ಕೇಳಿ ಬಂದಿರುವುದರಿAದ ಸಭೆಯ ಮುಖ್ಯ ವಿಷಯವಾಗಿ ಚರ್ಚಿಸಲಾಯಿತು. ಬಸ್ ನಿಲ್ದಾಣಕ್ಕೆ ರೂಪುರೇಷೆ ನೀಡುವುದು, ವಾಣಿಜ್ಯ ಮಳಿಗೆ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಲಾಯಿತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚಿಸಿ ಅನುಷ್ಠಾನಕ್ಕೆ ಮುಂದಾಗುವ ಬಗ್ಗೆ ಸದಸ್ಯರು ಸಲಹೆ ನೀಡಿದರು. ಈಗಿರುವ ತಾತ್ಕಾಲಿಕ ಬಸ್ ತಂಗುದಾಣದ ಹಿಂಬದಿಗೆ ನಿಲ್ದಾಣ ವಿಸ್ತರಿಸುವುದರಿಂದ ಹೆಚ್ಚು ಜಾಗ ದೊರೆಯಲಿದೆ ಎಂಬ ಸಲಹೆ ವ್ಯಕ್ತವಾಯಿತು.
ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ನಂತರ ನಡೆದ ಮೊದಲ ಸಭೆಯಲ್ಲಿ ಸಾರ್ವಜನಿಕ ಅಭಿವೃದ್ದಿ ಪರ ಚರ್ಚೆ ವ್ಯಕ್ತವಾಯಿತು. ಬಸ್ ನಿಲ್ದಾಣ ವಿಚಾರಕ್ಕೆ ಮಹತ್ವ ನೀಡಲಾಯಿತು. ಸರ್ವ ಸದಸ್ಯರು ಪಾಲ್ಗೊಂಡು ಸಲಹೆ ನೀಡಿದರು.
ಉಪಾಧ್ಯಕ್ಷೆ ಎಂ. ಸವಿತಾ, ಪಿಡಿಒ ಕುಟ್ಟಂಜೆಟ್ಟೀರ ಎಂ. ತಿಮ್ಮಯ್ಯ ಇದ್ದರು.