ಚೆಟ್ಟಳ್ಳಿ, ಸೆ. ೧: ಗ್ರೇಡ್-೧ ಗ್ರಾಮ ಪಂಚಾಯಿತಿಯ ಪಟ್ಟಿಯಲ್ಲಿ ಸೇರಿರುವ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೂತನ ಆಯ್ಕೆಯಾಗಿರುವ ಸದಸ್ಯರಲ್ಲಿ ಒಮ್ಮತವಿಲ್ಲ. ಇದರ ಪರಿಣಾಮ ಪ್ರತಿ ಪಂಚಾಯಿತಿ ಸಭೆಯೂ ಆರೋಪ-ಪ್ರತ್ಯಾರೋಪಗಳ ನಡುವೆಯೇ ಮುಂದುವರಿಯುತ್ತಿದ್ದು, ಯಾವುದೇ ಕಾಮಗಾರಿ ನಡೆಯದೆ ಸಾರ್ವಜನಿಕ ವಲಯದಲ್ಲಿ ಅಸÀಮಾಧಾನಕ್ಕೆ ಕಾರಣವಾಗಿದೆ.

ಚುನಾವಣೆ ನಡೆದ ಸಂದರ್ಭ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುತ್ತೇವೆಂಬ ಭರವಸೆಯೊಂದಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷದ ಬೆಂಬಲಿತ ಹಾಗೂ ಪಕ್ಷೇತರ ಅಭ್ಯರ್ಥಿಗಳ ಜಟಾಪಟಿಯ ನಡುವೆ ಎರಡೂ ಬಣಗಳಿಂದಲೂ ಪಕ್ಷದ ಬೆಂಬಲಿತ ನೂತನ ಹಾಗೂ ಈ ಹಿಂದೆ ಪಂಚಾಯಿತಿ ಆಡಳಿತ ನಡೆಸಿದ ಸದಸ್ಯರು ಕೂಡ ಗೆದ್ದು ಬಂದಿದ್ದಾರೆ. ಪರಿಶಿಷ್ಟ ಜಾತಿಯ ಮೀಸಲಾದ ಅಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಿ ಅಧ್ಯಕ್ಷರಾದರೆ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಗೊಂಡರು. ಮೊದಲ ಸಭೆಯಿಂದಲೇ ಸದಸ್ಯರ ನಡುವೆ ಒಮ್ಮತವಿಲ್ಲದೆ ಈ ಹಿಂದೆ ನಡೆದ ಹಲವು ಕಾಮಗಾರಿಯ ವಿಚಾರ ವೈಯಕ್ತಿಕ ವಿಚಾರಗಳ ನಡುವಿನ ಚರ್ಚೆಗಳ ಪರಿಣಾಮ ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಅವಕಾಶವೇ ಇಲ್ಲದ ಪರಿಸ್ಥಿತಿ ಇಲ್ಲಿದೆ.

ಅಲ್ಲಿ ಕೇಸು.. ಇಲ್ಲಿ ಸದಸ್ಯರು..!

ಬಿಜೆಪಿ ಪಕ್ಷದ ಟಿಕೆಟ್‌ಗಾಗಿ ಚೆಟ್ಟಳ್ಳಿ ಮೋದಿ ಭವನದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಟಿಕೆಟ್‌ಗಾಗಿ ನಡೆದ ಜಟಾಪಟಿಯಲ್ಲಿ ಕೈಕೈ ಮಿಲಾಯಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಎರಡು ಕಡೆಯ ಕೇಸು ಪೊಲೀಸ್ ಠಾಣೆಯಿಂದ ಕೋರ್ಟ್ ಮೆಟ್ಟಿಲೇರಿ ಮಡಿಕೇರಿ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಕೈಕೈ ಮಿಲಾಯಿಸಿದ ಇಬ್ಬರೂ ಪಂಚಾಯಿತಿ ಸದಸ್ಯರಾಗಿ ಗೆದ್ದು ಬಂದಿದ್ದಾರೆ. ಪರಿಶಿಷ್ಟರಿಗೆ ಸಂಬAಧಿಸಿದ ಕಾಂಕ್ರಿಟ್ ರಸ್ತೆ ಕಾಮಗಾರಿಯ ವಿಚಾರದಲ್ಲಿ ಇದೇ ಇಬ್ಬರು ಸದಸ್ಯರ ನಡುವಿನ ಮನಸ್ತಾಪಕ್ಕೆ ಕಾರಣವಾದರೂ ಪಂಚಾಯಿತಿ ಕಾರ್ಯದಲ್ಲಿ ಅಡೆತಡೆಗಳಿಲ್ಲ.

ಕೂಡ್ಲೂರು ವಾರ್ಡ್ ಟಾರ್ಗೆಟ್

ಕೂಡ್ಲೂರು ಚೆಟ್ಟಳ್ಳಿ ವಾರ್ಡಿನಲ್ಲಿ ಪಂಚಾಯಿತಿ ಚುನಾವಣೆಯ ಮಾಜಿ ಹಾಗೂ ಹಾಲಿ ಸದಸ್ಯರ ದ್ವೇಷ ಪ್ರತಿಯೊಂದು ಕಾಮಗಾರಿ ನಡೆಯುವಲ್ಲೂ ತಡೆಯಾಗುತ್ತಿದೆ. ಕಾಮಗಾರಿ ಪ್ರಾರಂಭವಾದೊಡನೆ ಪಂಚಾಯಿತಿಗೆ ಬೇನಾಮಿ ಹೆಸರಿನಲ್ಲಿ ಕಾಮಗಾರಿ ನಡೆಯುತ್ತಿಲ್ಲವೆಂಬ ಬಗ್ಗೆ ಮಾಹಿತಿ ನೀಡುವಂತೆ ಅರ್ಜಿಗಳು ಮಾಹಿತಿ ಹಕ್ಕಿನಡಿ ಪಂಚಾಯಿತಿ ಅಧಿಕಾರಿಯನ್ನು ಕೇಳುವುದರೊಂದಿಗೆ ಕಾರ್ಯನಿರ್ವಹಣಾಧಿಕಾರಿಗಳಿಗೂ ಸುಮಾರು ೧೫ ದೂರು ತಲುಪಿವೆ. ಇದರ ನಡುವೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ನೀಡಲು ಹಾಗೂ ಕಾರ್ಯ ಕೈಗೊಳ್ಳಲು ತಡಕಾಡುವ ಪರಿಸ್ಥಿತಿಯಾಗಿದೆ.

ಮೇಲಧಿಕಾರಿಗಳು ನೀಡಿರುವ ಆದೇಶಕ್ಕೆ ಒಂದೆರಡು ದಿನಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಿಖಿತವಾಗಿ ಉತ್ತರ ನೀಡಬೇಕಿದೆ. ಪಂಚಾಯಿತಿ ಒಳಗಿನ ಕೆಲವೊಂದು ಚರ್ಚಿಸಲಾದ ವಿಚಾರಗಳು ಕೆಲವು ಸದಸ್ಯರಿಂದಲೇ ಸಭೆ ಮುಗಿದ ತಕ್ಷ್ಷಣವೇ ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗುತ್ತಿದೆ.

ಅಧ್ಯಕ್ಷರಿಗೂ ಅಸಮಾಧಾನ...

ಪಂಚಾಯಿತಿಯ ಹೆಚ್ಚಿನ ಸದಸ್ಯರು ಒಮ್ಮತವಿದ್ದರೂ ಕೆಲವು ಸದಸ್ಯರಿಂದ ಕೆಲವೊಂದು ಗೊಂದಲಗಳು ನಡೆಯುತ್ತಿವೆ. ಈ ಹಿಂದಿನ ೧೫ನೇ ಹಣಕಾಸು ಯೋಜನೆಯ ಕೆಲಸಗಳು ನಡೆಯುತ್ತಿದ್ದರೂ ಉದ್ಯೋಗ ಖಾತರಿಯ ಕಾಮಗಾರಿಗಳು ಯಾವುದೂ ನಡೆಯುತ್ತಿಲ್ಲ. ಕೆಲವೊಂದು ಸದಸ್ಯರು ಅಧ್ಯಕ್ಷರ ಗಮನಕ್ಕೆ ತಾರದೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ಅಧ್ಯಕ್ಷ ಪಿ.ಟಿ. ಮುತ್ತಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಅಧ್ಯಕ್ಷರು ನಮ್ಮೊಂದಿಗೆ ಮಾತನಾಡುತ್ತಿಲ್ಲ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕೆಲಸ ತಿಳಿಸಿದರೂ ಅಧ್ಯಕ್ಷರು ಬಿಲ್ ಪಾಸ್ ಮಾಡುತ್ತಿಲ್ಲ ಎಂಬದು ಸದಸ್ಯರ ಆರೋಪ. ಕೂಡ್ಲೂರು ಚೆಟ್ಟಳ್ಳಿಯಲ್ಲಿ ಪ್ರತಿಯೊಂದು ಕಾಮಗಾರಿಯನ್ನು ಪ್ರಶ್ನಿಸಿ ತಡೆ ಒಡ್ಡುವುದರಿಂದಲೇ ಉಳಿದ ಎಲ್ಲಾ ವಾರ್ಡ್ನ ಕಾಮಗಾರಿಯ ಬಗ್ಗೆ ಒಮ್ಮತವಿಲ್ಲದ ಪಂಚಾಯಿತಿ ಸದಸ್ಯರಿಂದಲೇ ತಡೆ ಒಡ್ಡುವ ಪರಿಸ್ಥಿತಿ ಎದುರಾಗಿದೆ. ಕಾಮಗಾರಿಯ ಹಣಕ್ಕೆ ತಡೆಯಾಗುವ ಕಾರಣಕ್ಕೆ ಗುತ್ತಿಗೆದಾರರು ಮುಂದೆ ಬರದೆ ಕಾಮಗಾರಿ ನಡೆಯುತ್ತಿಲ್ಲವೆನ್ನುತ್ತಾರೆ ಪಂಚಾಯಿತಿ ಅಧ್ಯಕ್ಷರು.

ರಾಜೀನಾಮೆ ತೀರ್ಮಾನ..?

ಎಲ್ಲಾ ಗ್ರಾಮ ಪಂಚಾಯಿತಿಗಳ ಸದಸ್ಯರು ಒಮ್ಮತದಿಂದ ಪಂಚಾಯಿತಿ ಕಾಮಗಾರಿ ನಡೆದು ೭ ತಿಂಗಳುಗಳೇ ಕಳೆದರೂ ಚೆಟ್ಟಳ್ಳಿ ಪಂಚಾಯಿತಿಯೊಳಗಿನ ಸದಸ್ಯರೊಳಗಿನ ಮನಸ್ತಾಪಗಳಿಂದ ಕಾವiಗಾರಿ ನಡೆಯದೆ ಕೆಲವು ಸದಸ್ಯರುಗಳು ಬೇಜಾರು ಮಾಡಿಕೊಂಡಿದ್ದಾರೆ. ನಮ್ಮನ್ನು ಚುನಾಯಿಸಿ ಗೆಲ್ಲಿಸಿದ ಜನರಿಗೆ ನಮ್ಮಿಂದ ಕೆಲಸ ಕಾರ್ಯ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಕಳೆದ ನಾಲ್ಕುಬಾರಿ ಪಂಚಾಯಿತಿಗೆ ಆಯ್ಕೆಗೊಂಡ ಸದಸ್ಯ ಹಾಗೂ ಮಹಿಳಾಸದಸ್ಯೆಯೋರ್ವರು ತೀರ್ಮಾನಿಸಿರುವ ಬಗ್ಗೆಯೂ ಕೇಳಿಬರುತ್ತಿದೆ.

ತಮ್ಮ ಕಾರ್ಯಚಟುವಟಿಕೆಯ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದ ಗ್ರೇಡ್-೧ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸಾರ್ವಜನಿಕ ವಲಯದಲ್ಲಿ ವಿಶ್ವಾಸವನ್ನು ಕಳೆದುಕೊಳ್ಳತೊಡಗಿದೆ. ಪಂಚಾಯಿತಿ ಸದಸ್ಯರು ಇನ್ನಾದರೂ ವೈಯಕ್ತಿಕ ದ್ವೇಶದ ಪ್ರತಿಷ್ಠೆಯನ್ನು ಬದಿಗಿಟ್ಟು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುವರೆಂಬ ಕಾರಣಕ್ಕಾಗಿ ಓಟು ನೀಡಿ ಗೆಲ್ಲಿಸಿದಕ್ಕಾದರೂ ಗ್ರಾಮದ ಅಬಿವೃದ್ಧಿಯನ್ನು ಕೈಗೊಳ್ಳಲಿ ಎಂಬುದು ಸಾರ್ವಜನಿಕ ವಲಯ ದಲ್ಲಿ ಮಾತುಗಳು ಕೇಳಿಬರುತ್ತಿದೆ.

-ಪುತ್ತರಿರ ಕರುಣ್ ಕಾಳಯ್ಯ