ಪೆರಾಜೆ, ಸೆ. ೨: ಇಲ್ಲಿನ ಯುವಶಕ್ತಿ ಕ್ರೀಡಾ, ಹವ್ಯಾಸಿ ಸಂಘದ ಸ್ಥಾಪಕಾಧ್ಯಕ್ಷ ಹಾಗೂ ಪೆರಾಜೆ ಜ್ಯೋತಿ ಪ್ರೌಢ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ದೊಡ್ಡಣ್ಣ ಬರಮೇಲು ಅವರನ್ನು ಶ್ರೀ ಶಾಸ್ತಾವು ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಪ್ರಸನ್ನ ನೆಕ್ಕಿಲ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಯುವಶಕ್ತಿ ಸಂಘದಿAದ ಸನ್ಮಾನಿತರಿಗೆ ಚಿನ್ನದ ಉಂಗುರ ತೊಡಿಸಿ ಮಾತನಾಡಿದ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಸಮಾಜಕ್ಕೆ ದೊಡ್ಡಣ್ಣ ಅವರು ನೀಡಿರುವ ಕೊಡುಗೆ ಅಪಾರವಾಗಿದ್ದು, ಜಾನಪದ ಕ್ರೀಡೆಯಾದ ಲಗೋರಿಗೆ ಹೊಸ ನಿಯಮಗಳನ್ನು ರೂಪಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಡುವಂತೆ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು. ಈ ಸಂದರ್ಭ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ಜಿತೇಂದ್ರ ನಿಡ್ಯಮಲೆ, ಪಂಚಾಯಿತಿ ಸದಸ್ಯ ನಂಜಪ್ಪ ನಿಡ್ಯಮಲೆ, ಜ್ಯೋತಿ ಪ್ರೌಢಶಾಲಾ ಸಂಚಾಲಕ ಹರಿಶ್ಚಂದ್ರ ಮುಡ್ಕಜೆ, ಪೆರಾಜೆ ಪಂಚಾಯಿತಿ ಮಾಜಿ ಅಧ್ಯಕ್ಷ ಹೊನ್ನಪ್ಪ ಅಮಚೂರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರೇಖಾ ಅಡ್ಕದ ಮನೆ, ಅರೆಭಾಷೆ ಅಕಾಡೆಮಿ ಸದಸ್ಯ ಕಿರಣ್ ಕುಂಬಳಚೇರಿ, ಪ್ರೇಮಾ ದೊಡ್ಡಣ್ಣ ಬರಮೇಲು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಲೋಕೇಶ್ ಹೊದ್ದೆಟ್ಟಿ ಪ್ರಾರ್ಥಿಸಿ, ಸಂಘದ ಪದಾಧಿಕಾರಿ ಯತೀಶ ಬೆಟ್ಟಾಂಪಾಡಿ ಸ್ವಾಗತಿಸಿ ಪ್ರಸನ್ನ ನೆಕ್ಕಿಲ ವಂದಿಸಿದರು, ಮನೋಜ್ ನಿಡ್ಯಮಲೆ ಕಾರ್ಯಕ್ರಮ ನಿರೂಪಿಸಿದರು.