ಗೋಣಿಕೊಪ್ಪ ವರದಿ, ಸೆ. ೨: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಆವರಣದಲ್ಲಿರುವ ವಾಣಿಜ್ಯ ಕಟ್ಟಡದ ಮೊದಲ ಮಹಡಿಯಲ್ಲಿ ಮಳಿಗೆ ನಿರ್ಮಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಯಿತು. ಇದಕ್ಕಾಗಿ ರೂ. ೧೩ ಲಕ್ಷ ವಿನಿಯೋಗಿಸಲು ಅನುಮೋದನೆ ತೆಗೆದುಕೊಳ್ಳಲಾಯಿತು.

ಗ್ರಾ.ಪಂ. ಅಧ್ಯಕ್ಷೆ ಗಿರಿಜ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು. ಜಲ್ ಜೀವನ್ ಮಿಷನ್ ಯೋಜನೆಯಡಿ ಹಳ್ಳಿಗಟ್ಟು ಮತ್ತು ಹುದೂರು ಗ್ರಾಮ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡಲು ಗ್ರಾಮ ಮಟ್ಟದಲ್ಲಿ ಮತ್ತಷ್ಟು ಕುಡಿಯುವ ನೀರು ಯೋಜನೆ ಅನುಷ್ಠಾಗೊಳಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯಿತು. ವ್ಯಾಪ್ತಿಗೆ ಸೇರುವ ಸಾಕಷ್ಟು ಕಾಲೋನಿ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಶಾಶ್ವತ ಪರಿಹಾರ ಕ್ರಮಕ್ಕೆ ಮುಂದಾಗಲು ಸದಸ್ಯರು ಸಲಹೆ ನೀಡಿದರು. ನೀರಿನ ಟ್ಯಾಂಕ್ ನಿರ್ಮಾಣ, ಮನೆ, ಮನೆಗೆ ನಲ್ಲಿ ಕಲ್ಪಿಸಲು ಯೋಜನೆ ರೂಪಿಸಲಾಯಿತು. ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಅಭಿಯಾನ ಯಶಸ್ವಿಗೆ ಸದಸ್ಯರು ಒಂದಾಗಿ ಮತ್ತಷ್ಟು ಕ್ರಮಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಂತರ ನಡೆದ ಮೊದಲ ಸಭೆಯಲ್ಲಿ ಪೂರ್ಣ ಪ್ರಮಾಣದ ಸದ್ಯರು ಪಾಲ್ಗೊಂಡಿದ್ದರು. ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ, ಪಿಡಿಓ ಪುಟ್ಟರಾಜು ಇದ್ದರು.