ಮಡಿಕೇರಿ, ಸೆ. ೧: ಕೋವಿಡ್ ನಿರೋಧಕ ಲಸಿಕೆ ನೀಡುವಿಕೆಯಲ್ಲಿ ಕೊಡಗು ಜಿಲ್ಲೆ ರಾಜ್ಯಕ್ಕೆ ೨ನೆಯ ಸ್ಥಾನ ಪಡೆದುಕೊಂಡಿದ್ದು, ಶೇ.೭೭ ರಷ್ಟು ಮೊದಲನೆಯ ಡೋಸ್ ಲಸಿಕೆಯನ್ನು ಪೂರೈಸಿದ ಹಿನ್ನೆಲೆ ಈ ಸಾಧನೆ ಗೈದಿದೆ. ೨೦೧೧ರ ಜನಗಣತಿ ಪ್ರಕಾರ ೧೮ ವರ್ಷ ಮೇಲ್ಪಟ್ಟ ಒಟ್ಟು ೪,೦೨,೫೬೦ ಜನರ ಪೈಕಿ ೩,೧೧,೯೫೨ ಮಂದಿ ಮೊದಲನೆಯ ಡೋಸ್ ಪಡೆದುಕೊಂಡಿದ್ದು, ಶೇ.೭೭ ರಷ್ಟು ಸಾಧನೆ ಆಗಿದೆ. ೨ ವಾರಗಳಿಂದ ಅತ್ಯಧಿಕ ಲಸಿಕೆ ಸರಬರಾಜಾಗುತ್ತಿದ್ದು ಶೀಘ್ರದಲ್ಲೆ ಶೇ.೧೦೦ ಲಸಿಕೆ ಪೂರೈಕೆ ಆಗುವ ಲಕ್ಷಣಗಳೂ ಕಾಣುತ್ತಿವೆ. ಇದಲ್ಲದೆ ೨ನೇ ಡೋಸ್ ಪಡೆಯಲು ಅರ್ಹರಾಗಿರುವ ೧,೩೮,೩೧೨ ಮಂದಿಯ ಪೈಕಿ ಒಟ್ಟು ೧,೧೬,೬೯೫ ಮಂದಿ ಲಸಿಕೆ ಪಡೆದಿದ್ದು, ಶೇ.೮೪ ರಷ್ಟು ಸಾಧನೆಯಾಗಿದೆ.

ಲಸಿಕೆ ಸರಬರಾಜು ಹೆಚ್ಚಳ

ಈ ಹಿಂದೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲಸಿಕೆ ಸರಬರಾಜು ಆಗುತ್ತಿದ್ದು,

(ಮೊದಲ ಪುಟದಿಂದ) ೨ ದಿನಕ್ಕೊಮ್ಮೆ ಮಾತ್ರ ನೂತನ ಲಸಿಕಾ ಡೋಸ್‌ಗಳು ಜಿಲ್ಲೆಗೆ ಆಗಮಿಸುತ್ತಿದ್ದವು. ಲಸಿಕೆ ಸರಬರಾಜು ಆಗದ ದಿನ ಬಾಕಿ ಉಳಿದಿರುವ ಲಸಿಕೆಯನ್ನು ಮಾತ್ರ ಸಾರ್ವಜನಿಕರಿಗೆ ನೀಡಲಾಗುತ್ತಿತ್ತು. ಕೆಲವೊಮ್ಮೆ ಒಂದು ಲಸಿಕಾ ಡೋಸ್ ಕೂಡ ಲಭ್ಯವಾಗದೆ, ದಿನದ ಲಸಿಕಾ ಅಭಿಯಾನ ಸ್ಥಗಿತವಾಗುತ್ತಿತ್ತು. ಆದರೆ ಇದೀಗ ಬಾಕಿ ಉಳಿದಿರುವ ಲಸಿಕೆಯ ಪ್ರಮಾಣವು ಹೆಚ್ಚಿದ್ದು ಆಗಸ್ಟ್ ೩೧ ರಂದು ಒಟ್ಟು ೬,೯೦೦ ಡೋಸ್‌ಗಳು ಜಿಲ್ಲೆಯಲ್ಲಿ ಉಳಿಕೆಯಾಗಿದ್ದು, ಸೆಪ್ಟೆಂಬರ್ ೧ ರಂದು ಬಂದ ಒಟ್ಟು ನೂತನ ೭,೬೨೦ ಡೋಸ್‌ಗಳೊಂದಿಗೆ ಇದನ್ನೂ ನೀಡಲಾಯಿತು. ಲಸಿಕೆ ಕೊರತೆಯಿಂದ ಬಳಲುತ್ತಿದ್ದ ಜಿಲ್ಲೆಗೆ ಇದೀಗ ಕಳೆದ ೧೫ ದಿನಗಳಿಂದ ಲಸಿಕೆ ಸರಬರಾಜು ಅಧಿಕವಾಗಿದೆ.. ಆರೋಗ್ಯ ಇಲಾಖೆಯೊಂದಿಗೆ ಪಂಚಾಯಿತಿಗಳು ಸೇರಿದಂತೆ ಇತರ ಇಲಾಖೆಗಳ ಸಹಯೋಗದಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳು ಸೇರಿದಂತೆ ಗಡಿ ಪ್ರದೇಶಗಳಲ್ಲಿ ವಿಶೇಷ ಗಮನ ಹರಿಸಿ ಲಸಿಕೆ ಪೂರೈಕೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.