ಮಡಿಕೇರಿ, ಸೆ. ೧: ಕೃಷಿ ಪ್ರಧಾನವಾಗಿರುವ ಕೊಡಗಿನಲ್ಲಿ ಪ್ರಸ್ತುತ ಹಲವಾರು ಸಮಸ್ಯೆಗಳು ಹಾಗೂ ಕಾರಣಾಂತರಗಳಿAದ ಭತ್ತದ ಕೃಷಿಯತ್ತ ರೈತರು ನಿರಾಸಕ್ತಿ ತೋರುತ್ತಿರುವುದು ಎಲ್ಲರಿಗೂ ಅರಿವಿದೆ. ಆದರೂ ಕೆಲವಾರು ಉತ್ಸಾಹಿ ಕೃಷಿಕರು ಪಾರಂಪರಿಕವಾದ ಭತ್ತದ ಕೃಷಿಯನ್ನು ಮುಂದುವರಿಸಲೇಬೇಕೆAಬ ಪ್ರಯತ್ನ ನಡೆಸುತ್ತಿರುವುದು ಒಂದಷ್ಟು ಶ್ಲಾಘನೀಯ ವಿಚಾರವಾಗಿದೆ.

ಇತ್ತೀಚೆಗೆ ಕೆಲವು ಯುವಕರು ನಿಂತು ಹೋಗಿರುವ ಕೃಷಿಗೆ ಪುನರ್‌ಜೀವ ಕೊಡುವ ಪ್ರಯತ್ನಕ್ಕೆ ಮುಂದಾಗುತ್ತಿರುವುದು ಒಂದಷ್ಟು ಆಶಾದಾಯಕವಾದ ಬೆಳವಣಿಗೆ ಯಾಗಿದೆ. ಆದರೆ ದಕ್ಷಿಣ ಕೊಡಗಿನಲ್ಲಿ ಹಲವರಲ್ಲಿ ಭತ್ತದ ಕೃಷಿಯ ಆಸಕ್ತಿಯಿದ್ದರೂ ಇದಕ್ಕೆ ಆ ಭಾಗದ ಕೊಲ್ಲಿ ತೋಡುವಿನಿಂದ ಸಮಸ್ಯೆ ಎದುರಾಗುತ್ತಿರುವುದು ವಿಷಾದಕರ ವಾಗುತ್ತಿದೆ. ಇಲ್ಲಿ ಸಾವಿರಾರು ಎಕರೆ ಭತ್ತದ ಗದ್ದೆಗಳಿವೆ. ಕಾಡಾನೆಗಳಂತಹ ಪ್ರಾಣಿಗಳ ಉಪಟಳವೂ ಇಲ್ಲ. ಆದರೆ ಸಮಸ್ಯೆ ಇರುವುದೇ ಈ ಕೊಲ್ಲಿತೋಡು... ಇದರಿಂದಾಗಿ ಸಾವಿರಾರು ಎಕರೆ ಭತ್ತದ ಗದ್ದೆಗಳು ಪಾಳುಬಿದ್ದಿವೆ.

ದಕ್ಷಿಣ ಕೊಡಗಿನ ಬೇಗೂರು, ಚೀನಿವಾಡದಿಂದ ಪ್ರಾರಂಭವಾಗುವ ಕೊಲ್ಲಿತೋಡು, ಕೋಣಗೇರಿ, ಹುದಿಕೇರಿ, ನಡಿಕೇರಿ, ಚಿಕ್ಕಮುಂಡೂರು, ತೂಚಮಕೇರಿ, ಹರಿಹರ, ಬಲ್ಯಮುಂಡೂರು ಮೂಲಕ ಸಾಗಿ ಲಕ್ಷö್ಮಣತೀರ್ಥ ನದಿಯನ್ನು ಸೇರುತ್ತದೆ. ಪ್ರಸ್ತುತ ಈ ಕೊಲ್ಲಿತೋಡುವಿನಲ್ಲಿ ಹೂಳು ತುಂಬಿ ಹಾಗೂ ಕಾಡು ಬೆಳೆದಿದ್ದು, ಸರಾಗವಾಗಿ ನೀರು ಹರಿಯದೆ ಈ ತೋಡು ವ್ಯಾಪ್ತಿಯ ಭತ್ತದ ಗದ್ದೆಗಳಿಗೆ ನಿರಂತರವಾಗಿ ಸಮಸ್ಯೆ ಎದುರಾಗುತ್ತಿದೆ.

(ಮೊದಲ ಪುಟದಿಂದ) ಈ ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚು ಮಳೆಯಾಗದಿದ್ದರೂ ಒಂದು ಪಕ್ಷ ಬೇರೆಡೆ ಮಳೆ ಬಂದರೂ ಪ್ರವಾಹ ಪರಿಸ್ಥಿತಿ ಎದುರಾಗುತ್ತದೆ. ಇದರಿಂದಾಗಿ ಈ ವಿಭಾಗದ ರೈತರು ಗದ್ದೆ ಕೆಲಸ ನಿರ್ವಹಿಸಲು ಕೈಲು ಮುಹೂರ್ತ ಹಬ್ಬ ಕಳೆಯುವ ತನಕವೂ ಕಾಯಬೇಕಾದಂತಹ ಸನ್ನಿವೇಶ ವರ್ಷಂಪ್ರತಿ ಸಾಮಾನ್ಯವೆನಿಸಿದೆ.

ಹರಿಹರದಲ್ಲೆ ಲಕ್ಷö್ಮಣತೀರ್ಥ ನದಿಗೆ ಸೇತುವೆಯೊಂದಿತ್ತು. ಇದು ಮಳೆಗಾಲದಲ್ಲಿ ನೀರು ಹೆಚ್ಚು ಬರುತ್ತದೆ ಎಂಬ ಕಾರಣದಿಂದ ಇದನ್ನು ಕೆಡವಿ ಹೊಸ ಸೇತುವೆಯೊಂದನ್ನು ನಿರ್ಮಿಸಲಾಗುತ್ತಿದೆಯಾದರೂ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ಬಗೆಹರಿದಿಲ್ಲ. ಈ ವಿಭಾಗದಲ್ಲಿ ಚೆಕ್ಕೇರ, ಇಟ್ಟೀರ, ಅಜ್ಜಿಕುಟ್ಟೀರ, ಕಳ್ಳಿಚಂಡ, ಮಾಚಿಮಾಡ ಮತ್ತಿತರ ಕುಟುಂಬಸ್ಥರಿಗೆ ಸೇರಿದ ಸುಮಾರು ಐದು ಸಾವಿರ ಎಕರೆಯಷ್ಟು ಭತ್ತದ ಗದ್ದೆಗಳು ಬರುತ್ತವೆ. ಈ ಸಮಸ್ಯೆಯಿಂದಾಗಿ ಬಹುತೇಕ ಗದ್ದೆಗಳು ಪಾಳುಬಿದ್ದಿದ್ದು, ವಿರಳ ಸಂಖ್ಯೆಯ ರೈತರು ಮಾತ್ರ ಕೃಷಿ ಮಾಡುತ್ತಿದ್ದಾರೆ.

ವರ್ಷಗಟ್ಟಲೆಯಿಂದ ಸಮಸ್ಯೆ

ಮಳೆ ಬಂದಾಗ ಪ್ರವಾಹ ಪರಿಸ್ಥಿತಿಗೆ ಕಾರಣವಾಗುವ ಈ ಕೊಲ್ಲಿ ತೋಡುವಿನ ಹೂಳೆತ್ತುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡಿದಲ್ಲಿ ಸಮಸ್ಯೆ ಬಗೆಹರಿದು ಹೆಚ್ಚಿನ ರೈತರು ಕೃಷಿಗೆ ಮುಂದಾಗಲಿದ್ದಾರೆ ಎನ್ನುತ್ತಾರೆ ವ್ಯಾಪ್ತಿಯ ಕೃಷಿಕರಾದ ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಅವರು.

ಕುಮಾರ್ ಬಂಗಾರಪ್ಪ ಅವಧಿಯಲ್ಲಿ...

ಈ ಹಿಂದೆ ವೀರಪ್ಪಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕುಮಾರ್ ಬಂಗಾರಪ್ಪ ಅವರು ಸಣ್ಣ ನೀರಾವರಿ ಸಚಿವರಾಗಿದ್ದರು. ಈ ಅವಧಿಯಲ್ಲಿ ಕೊಲ್ಲಿತೋಡುವಿನ ಹೂಳೆತ್ತುವ ಕೆಲಸ ನಿರ್ವಹಿಸಿದ್ದು, ಆಗ ಒಂದಷ್ಟು ಸಮಸ್ಯೆ ಬಗೆಹರಿದಿತ್ತು. ಸುಮಾರು ಮೂರು ವರ್ಷ, ಹೆಚ್ಚಿನ ರೈತರು ಭತ್ತ ಬೆಳೆದಿದ್ದರು. ಆದರೆ ಮತ್ತೆ ಹೂಳು ತುಂಬಲಾರAಭಿಸಿದ್ದು ಇದನ್ನು ಸರಿಪಡಿಸದ ಕಾರಣ ಈ ತನಕವೂ ಸಮಸ್ಯೆ ಮರುಕಳಿಸಿರುವುದಾಗಿ ರಾಬಿನ್ ‘ಶಕ್ತಿ’ಗೆ ವಿವರಿಸಿದರು.

ಇದರ ಬಗ್ಗೆ ಈ ಹಿಂದೆ ಕೊಲ್ಲಿ ಭೂಮಿ ಅಭಿವೃದ್ಧಿ ಸಂಘವನ್ನು ರಚಿಸಿಕೊಂಡು ಪ್ರಯತ್ನ ನಡೆಸಲಾಗಿತ್ತು. ಆದರೆ ಇದೀಗ ಈ ಸಂಘವೂ ಕ್ರಿಯಾಶೀಲವಾಗಿಲ್ಲ ಎಂದು ಅವರು ತಿಳಿಸಿದರು.

ಯಾರದೋ ಪೈರು... ಯಾರದೋ ಗದ್ದೆಯಲ್ಲಿ...

ನಾಟಿ ಕೆಲಸಕ್ಕಾಗಿ ಭತ್ತದ ಪೈರನ್ನು ಸಿದ್ಧಪಡಿಸಲಾಗಿರುತ್ತದೆ. ಒಂದು ವೇಳೆ ಈ ಸಂದರ್ಭದಲ್ಲಿ ಮಳೆ ಬಂದು ಪ್ರವಾಹದಂತೆ ನೀರು ಬಂದಲ್ಲಿ ಯಾರದೋ ಪೈರು ರಾತೋರಾತ್ರಿ ಯಾರದೋ ಗದ್ದೆಯಲ್ಲಿ ತೇಲಾಡುತ್ತಿರುತ್ತದೆ ಎನ್ನುತ್ತಾರೆ ಅಲ್ಲಿನ ರೈತರು. ಪ್ರಸ್ತುತದ ವರ್ಷವೂ ಇದೇ ಸಮಸ್ಯೆ ಈ ವಿಭಾಗದಲ್ಲಿ ಕಂಡುಬರುತ್ತಿದ್ದು, ನಾಟಿ ಕೆಲಸ ಪೂರೈಸಲು ಇನ್ನೂ ದುಸ್ತರವಾಗುತ್ತಿದೆ.

ಜಿಲ್ಲಾಡಳಿತ ಹಾಗೂ ಸಂಬAಧಿಸಿದವರು ಈ ಬಗ್ಗೆ ಗಮನಹರಿಸಿ ಕೊಲ್ಲಿತೋಡನ್ನು ಸಮರ್ಪಕಗೊಳಿಸಿದಲ್ಲಿ ಹೆಚ್ಚು ರೈತರು ಭತ್ತದ ಕೃಷಿಯತ್ತ ಮುಂದಾಗುವ ಸಾಧ್ಯತೆ ಇದೆ.

-ಶಶಿ ಸೋಮಯ್ಯ