ಮಡಿಕೇರಿ, ಸೆ. ೨: ಕಾಡು ಪ್ರಾಣಿಗಳ ಹಾವಳಿಯಿಂದ ಬಸವಳಿದ ರೈತರಿಗೆ ಆಶಾದಾಯಕವಾಗುವಂತಹ, ಕಾಡುಪ್ರಾಣಿ-ಪಕ್ಷಿಗಳನ್ನು ಓಡಿಸುವ ಯಂತ್ರವನ್ನು ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳ ತಂಡ ಸಿದ್ಧಪಡಿಸಿದೆ.

ಅರಣ್ಯ ಪ್ರದೇಶಗಳಿಗೆ ತಾಗಿಕೊಂಡಿರುವAತಹ ಕೃಷಿ ಭೂಮಿಗಳಿಗೆ ಆಗಾಗ್ಗೆ ಕಾಡುಪ್ರಾಣಿಗಳು ಹಾಗೂ ಕೆಲವು ಪಕ್ಷಿಗಳಿಂದ ಬಹಳ ಹಾನಿಯುಂಟಾಗುತ್ತಿವೆ. ಇದರಿಂದ ಕೃಷಿಕರು ಆರ್ಥಿಕವಾಗಿ ಬಹಳ ನಷ್ಟವನ್ನು ಅನುಭವಿಸುತ್ತಿದ್ದಾರೆ. ಈಗಾಗಲೆ ಅನೇಕ ರೋಗಗಳಿಂದ ಕೃಷಿಯಲ್ಲಿ ನಷ್ಟವನ್ನು ಅನುಭವಿಸಿರುವ ಕೃಷಿಕರು ಈ ಪ್ರಾಣಿಪಕ್ಷಿಗಳ ಹಾವಳಿ ಯಿಂದ ಕಂಗೆಟ್ಟು ಹೋಗಿದ್ದಾರೆ.

ಕೃಷಿಕರ ಈ ಕಷ್ಟವನ್ನು ಮನಗಂಡ ಕೆ.ವಿ.ಜಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ದರ್ಶನ್ ಬಿ.ಎಂ., ಅನಿಲ್‌ಕುಮಾರ್ ನಾಯ್ಕ್ ಮತ್ತು ಅಬ್ದುಲ್ ವಾಹಿದ್ ಪಿ.ಎ. ಅವರುಗಳು ಕಾಡುಪ್ರಾಣಿ-ಪಕ್ಷಿ ಓಡಿಸುವ ಯಂತ್ರವನ್ನು ಮೆಕ್ಯಾನಿಕಲ್ ತಾಂತ್ರಿಕ ವಿಭಾಗದ ಪ್ರೊ. ಅಭಿಜ್ಞ ಬಿ.ಬಿ. ಅವರ ಮಾರ್ಗದರ್ಶನದಲ್ಲಿ ಹಾಗೂ ಮೆಕ್ಯಾನಿಕಲ್ ತಾಂತ್ರಿಕ ವಿಭಾಗದ ಮುಖ್ಯಸ್ಥ ಡಾ. ಉಮಾಶಂಕರ್ ಕೆ.ಎಸ್. ಮತ್ತು ಯೋಜನಾ ಸಂಯೋಜಕ ಪ್ರೊ. ಯುವರಾಜ್ ಕೆ.ಬಿ. ಯವರ ಸಲಹೆ ಸೂಚನೆಯೊಂದಿಗೆ ಸಿದ್ಧಪಡಿಸಿದ್ದಾರೆ. ಈ ಯಂತ್ರವನ್ನು ಬೆಳೆ ಬೆಳೆದಿರುವ ಪ್ರದೇಶದಲ್ಲಿ ಸ್ಥಾಪಿಸಬೇಕಾಗಿದ್ದು, ಯಂತ್ರದ ಸುತ್ತಲು ೩೬೦ ಡಿಗ್ರಿಯಲ್ಲಿ ಪ್ರಾಣಿಪಕ್ಷಿಗಳ ಬರುವಿಕೆಯನ್ನು ಗುರುತಿಸುತ್ತದೆ.

ಈ ಗುರುತಿಸುವಿಕೆಯನ್ನು ಪ್ರೊಕ್ಸಿಮಿಟ್ ಸೆನ್ಸರ್‌ನ ಮೂಲಕ ಮಾಡುವುದರ ಜೊತೆಗೆ, ಸೆನ್ಸರ್‌ನ ಮೂಲಕ ಬಂದ ಸಿಗ್ನಲನ್ನು ‘ಆರ್ಡಿನೋ ಬೋರ್ಡ್’ಗೆ ರವಾನಿಸು ತ್ತದೆ. ಆರ್ಡಿನೋ ಬೋರ್ಡ್ನಲ್ಲಿ ಬಂದ ಸಿಗ್ನಲ್, ಧ್ವನಿ ಮತ್ತು ಬೆಳಕಿನ ಉಪಕರಣಗಳಿಗೆ ಆದೇಶವನ್ನು ಕೊಡುವುದರ ಮೂಲಕ ಶಬ್ಧ ಉಂಟಾಗುತ್ತದೆ. ಜೊತೆಗೆ ಟಾರ್ಚ್ ಬೆಳಕಿನಂತೆ ಬೆಳಕು ಹಾಯುವುದರ ಮೂಲಕ, ಬಂದ ಪ್ರಾಣಿ ಪಕ್ಷಿಗಳಿಗೆ ಮನುಷ್ಯನ ಇರುವಿಕೆಯ ಅನುಭವವನ್ನು ಕೊಟ್ಟು ಪ್ರಾಣಿ ಪಕ್ಷಿಗಳು ಓಡಿ ಹೋಗುವಂತೆ ಮಾಡುತ್ತದೆ.