ಮಡಿಕೇರಿ, ಆ.೩೧ : ವಾಹನ ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಬಡ ವರ್ಗದ ಬಿಪಿಎಲ್ ಕಾರ್ಡ್ಗಳನ್ನು ಆಹಾರ ಇಲಾಖೆ ರದ್ದು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ನ ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ, ತಕ್ಷಣ ಈ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಸ್ತುತ ಪರಿಸ್ಥಿತಿಯಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೆಲಸಕ್ಕೆ ತೆರಳಲು ಪ್ರತಿಯೊಬ್ಬರೂ ವಾಹನ ಹೊಂದುವುದು ಅನಿವಾರ್ಯ ವಾಗಿದೆ. ಕೂಲಿ ಕಾರ್ಮಿಕರು ಹಾಗೂ ಬಡವರು ಹಳೆಯ ದ್ವಿಚಕ್ರ ವಾಹನ ಅಥವಾ ಅತ್ಯಂತ ಕಡಿಮೆ ಮೌಲ್ಯದ ಹಳೆಯ ಕಾರುಗಳನ್ನು ಹೊಂದಿರುವುದು ಸಹಜ. ಆದರೆ ಇದನ್ನೇ ನೆಪ ಮಾಡಿಕೊಂಡು ಆಹಾರ ಇಲಾಖೆ ಅಧಿಕಾರಿಗಳು ಬಿಪಿಎಲ್ ಕಾರ್ಡ್ಗಳನ್ನು ಅನರ್ಹಗೊಳಿಸು ತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲಾ ವಸ್ತುಗಳ ಬೆಲೆ ಏರಿಕೆಯ ನಡುವೆಯೇ ಆದಾಯವೂ ಕುಂಠಿತವಾಗುತ್ತಿದೆ. ಕೋವಿಡ್ ಸಂದಿಗ್ಧ ಪರಿಸ್ಥಿತಿಯಿಂದಾಗಿ ನಿತ್ಯ ದುಡಿದು ತಿನ್ನುವವರು ಕೆಲಸವಿಲ್ಲದೆ ಪರದಾಡುತ್ತಿ ದ್ದಾರೆ. ಬಡವರು, ಕೂಲಿ ಕಾರ್ಮಿಕರು, ಆಟೋ ಚಾಲಕರು, ರಸ್ತೆ ಬದಿ ವ್ಯಾಪಾರಿಗಳು, ಸಣ್ಣ ವರ್ತಕರು, ರೈತರು, ಖಾಸಗಿ ಸಂಸ್ಥೆಗಳ ಸಿಬ್ಬಂದಿಗಳು ಜೀವನ ಸಾಗಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಸಂಕಷ್ಟ ಎದುರಾ ದಾಗ ಸರ್ಕಾರಗಳು ನೆರವಿಗೆ ಬರಬೇಕೆ ಹೊರತು ಇರುವ ಕನಿಷ್ಟ ಸೌಲಭ್ಯವನ್ನು ಕೂಡ ಕಸಿದುಕೊಳ್ಳಬಾರದು ಎಂದು ಫ್ಯಾನ್ಸಿ ಪಾರ್ವತಿ ಆಗ್ರಹಿಸಿದ್ದಾರೆ.

ಇದರ ವಿರುದ್ಧ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಸರ್ಕಾರಕ್ಕೆ ಜಿಲ್ಲೆಯ ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಬೆಟ್ಟಗುಡ್ಡ ಪ್ರದೇಶವೆಂದು ವಿಶೇಷವಾಗಿ ಪರಿಗಣಿಸಿ ಎಪಿಎಲ್ ಕಾರ್ಡುದಾರರಿಗೂ ಹೆಚ್ಚಿನ ಪಡಿತರ ಸೌಲಭ್ಯಗಳನ್ನು ನೀಡಲಿ ಎಂದು ಒತ್ತಾಯಿಸಿದ್ದಾರೆ.