ಕೂಡಿಗೆ, ಆ. ೩೧: ಗಿರಿಜನರಿಗೆ ಸರಕಾರ ಘೋಷಿಸಿರುವ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಬಿ.ಜೆ.ಪಿ. ಎಸ್.ಟಿ. ಮೋರ್ಚಾ ಜಿಲ್ಲಾ ಗಿರಿಜನ ಸಮನ್ವಯ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಯೋಜನೆಗಳು ಅನುಷ್ಠಾನಗೊಂಡಿರುವ ಹಿನ್ನೆಲೆ ಅವುಗಳನ್ನು ಜಾರಿಗೆ ತಂದು ಕಾರ್ಯಗತಗೊಳಿಸಬೇಕು. ಸರಕಾರದಿಂದ ಗಿರಿಜನರ ವಿಶೇಷ ಅನುದಾನದಲ್ಲಿ ಮನೆಗಳ ನಿರ್ಮಾಣ ಮತ್ತು ಅವರುಗಳು ಆರ್ಥಿಕವಾಗಿ ಸಬಲರಾಗಲು ಕುರಿ ಮತ್ತು ಮೇಕೆಗಳ ಕೊಟ್ಟಿಗೆ ಮಾಡಿಕೊಡುವ ಯೋಜನೆ ಈಗಾಗಲೇ ಸರಕಾರದಿಂದ ಮಂಜೂರು ಆಗಿರುವುದರಿಂದ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಕೊರೊನಾ ಪರಿಸ್ಥಿತಿ ಮತ್ತು ಪ್ರಾಕೃತಿಕ ವಿಕೋಪದಿಂದ ಯಾವುದೇ ಯೋಜನೆಗಳು ಅನುಷ್ಠಾನವಾಗಿಲ್ಲ. ಈ ಹಿನ್ನೆಲೆ ಅಧಿಕಾರಿಗಳು ಗಮನ ಹರಿಸಬೇಕೆಂದು ಮೋರ್ಚಾ ಒತ್ತಾಯಿಸಿದೆ.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಸಂಬAಧಪಟ್ಟ ಸಚಿವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗುವುದು ಎಂದು ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಿ.ಆರ್. ಪ್ರಭಾಕರ್ ತಿಳಿಸಿದ್ದಾರೆ.

ಈ ಸಂದರ್ಭ ಮೋರ್ಚಾದ ಜಿಲ್ಲಾ ಅಧ್ಯಕ್ಷ ಮಿಟ್ಟು ರಂಜಿತ್, ರಾಜ್ಯ ಸಮಿತಿಯ ಸದಸ್ಯ ಬಿ.ಕೆ. ಮೋಹನ್, ಪರಮೇಶ್ವರ್, ತಾಲೂಕು ಕಾರ್ಯದರ್ಶಿ ನಾಗೇಶ್ ಬಾಣವಾರ, ತಾಲೂಕು ಉಪಾಧ್ಯಕ್ಷ ಮಲ್ಲೇಶ್ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.