ಕಾಬೂಲ್ ವಿಮಾನ ನಿಲ್ದಾಣ ದಾಳಿಕೋರರಿಗೆ ಬೈಡನ್ ಎಚ್ಚರಿಕೆ

ವಾಷಿಂಗ್ಟನ್, ಆ. ೨೭: ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಹೊರತಾಗಿಯೂ ಅಫ್ಘಾನಿಸ್ತಾನದಿಂದ ಅಮೇರಿಕಾದ ನಾಗರಿಕರನ್ನು ಮತ್ತು ಇತರರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರು ಪ್ರತಿಜ್ಞೆ ಮಾಡಿದ್ದಾರೆ. ಇದೇ ವೇಳೆ ಅಮೇರಿಕಾ ಸೈನಿಕರನ್ನು ಹತ್ಯೆ ಮಾಡಿದವರನ್ನು ನಾವೆಂದೆAದೂ ಕ್ಷಮಿಸುವುದಿಲ್ಲ ಎಂದಿರುವ ಬೈಡನ್ ೧೩ ಅಮೇರಿಕಾ ಸೈನಿಕರ ಸಾವಿಗೆ ಸೇಡು ತೀರಿಸಿಕೊಳ್ಳುವ ಭರವಸೆ ನೀಡಿದ್ದಾರೆ. ಬಾಂಬ್ ದಾಳಿಯನ್ನು ಮರೆಯುವುದೂ ಇಲ್ಲ. ಸೈನಿಕರ ಹತ್ಯೆಗೆ ಪ್ರತೀಕಾರವಾಗಿ ನಿಮ್ಮನ್ನು ಬೇಟೆಯಾಡಿ ಬುದ್ಧಿ ಕಲಿಸುತ್ತೇವೆ ಎಂದು ಜೋ ಬೈಡನ್ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ. ಕಾಬೂಲ್‌ನಲ್ಲಿ ನಿನ್ನೆ ನಡೆದ ಬಾಂಬ್ ಸ್ಫೋಟದಲ್ಲಿ ಅಮೇರಿಕಾದ ೧೩ ಸೈನಿಕರು ಸೇರಿದಂತೆ ೧೦೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೈಡನ್ ಹೇಳಿದ್ದಾರೆ. ಈ ಭಯೋತ್ಪಾದಕ ಕೃತ್ಯಕ್ಕೆ ಅಮೇರಿಕಾ ಭಯಪಡುವುದಿಲ್ಲ. ಉಗ್ರರಿಗೆ ತಕ್ಕ ಶಾಸ್ತಿ ಮಾಡುವವರೆಗೂ ನಾವು ವಿರಮಿಸುವುದಿಲ್ಲ. ಅಫ್ಘಾನ್‌ನಲ್ಲಿ ನೆಲಸಿರುವ ಅಮೇರಿಕನ್ನರನ್ನು ತೆರವುಗೊಳಿಸಿ ಸುರಕ್ಷಿತವಾಗಿ ಕರೆ ತರಲಾಗುವುದು ಎಂದು ಬೈಡನ್ ಹೇಳಿದ್ದಾರೆ. ಅಮೇರಿಕಾದ ಶ್ವೇತಭವನದಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಅವರು, ಹತ್ಯೆಯಾದ ಅಮೇರಿಕಾದ ಸೈನಿಕರು ನಿಜವಾದ ಹೀರೋಗಳು ಎಂದು ಶ್ಲಾಘಿಸಿ, ಕಾಬೂಲ್‌ನಲ್ಲಿ ಸಿಲುಕಿರುವ ಅಮೇರಿಕನ್ನರನ್ನು ಸ್ಥಳಾಂತರಿಸುವ ಕಾರ್ಯ ತಾ. ೩೧ ರವರೆಗೂ ನಡೆಯಲಿದೆ ಎಂದು ತಿಳಿಸಿದ್ದಾರೆ.

ಎನ್‌ಇಪಿಯಿಂದ ವಿದ್ಯಾರ್ಥಿಗಳಲ್ಲಿ ಜ್ಞಾನದ ಜೊತೆಗೆ ಕೌಶಲ್ಯ ಅಭಿವೃದ್ಧಿ

ಬೆಂಗಳೂರು, ಆ. ೨೭: ಕರ್ನಾಟಕದಲ್ಲಿ ಪ್ರಸಕ್ತ ವರ್ಷದಿಂದಲೇ ಜಾರಿಗೆ ಬರುತ್ತಿರುವ ರಾಷ್ಟಿçÃಯ ಶಿಕ್ಷಣ ನೀತಿ-೨೦೨೦ರ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊAಡರು. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ, ಸಮಗ್ರ ಪ್ರಗತಿಗೆ ಎನ್ ಇಪಿ-೨೦೨೦ ಪ್ರಮುಖ ಪಾತ್ರ ವಹಿಸಲಿದೆ. ನಿಖರ ಮಾಹಿತಿ ಪ್ರಸಾರ, ರಾಷ್ಟಿçÃಯ ಶಿಕ್ಷಣ ನೀತಿಯ ಸಮರ್ಪಕ ಅನುಷ್ಠಾನಕ್ಕಾಗಿ ಮಾಧ್ಯಮಗಳ ಸಹಕಾರ ಅತ್ಯಗತ್ಯ ಎಂದು ಅವರು ಕೋರಿದರು. ಇಂದಿನ ಶಿಕ್ಷಣ ಮತ್ತು ಔದ್ಯೋಗಿಕ ವಲಯಗಳಲ್ಲಿ ಇರುವ ಬೇಡಿಕೆಗಳ ನಡುವಿನ ಅಂತರವನ್ನು ತೆಗೆದುಹಾಕುವಲ್ಲಿ ನೂತನ ಶಿಕ್ಷಣ ನೀತಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಯು ತನ್ನ ಆಯ್ಕೆಯ, ಬಯಕೆಯ ವಿಷಯಗಳನ್ನು ಮುಕ್ತವಾಗಿ ಕಲಿಯಲು ನೂತನ ಶಿಕ್ಷಣ ನೀತಿ ಸಹಕಾರಿಯಾಗಲಿದೆ ಎಂದು ಸಂವಾದದ ವೇಳೆ ಸಚಿವರು ಹೇಳಿದರು. ಸಾಮಾಜಿಕವಾಗಿ ಪ್ರಸ್ತುತವಾಗಿರುವ ವಿಷಯಗಳು, ಜೀವನ ಮೌಲ್ಯಗಳು, ಜೀವನ ಅನುಭವಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿತು ಪದವಿ ನಂತರ ಅವರು ಸಮಾಜವನ್ನು, ಜೀವನವನ್ನು ಸಮರ್ಥವಾಗಿ ಎದುರಿಸುವಂತೆ ಮಾಡುವಲ್ಲಿ ಹೊಸ ಶಿಕ್ಷಣ ನೀತಿ ಸಹಾಯವಾಗಲಿದೆ. ಪುಸ್ತಕದಲ್ಲಿರುವುದನ್ನು ಉರು ಹೊಡೆದು ಬರೆದು ಪರೀಕ್ಷೆಯಲ್ಲಿ ಬರೆದು ತೇರ್ಗಡೆ ಹೊಂದುವುದು ಮಾತ್ರ ಶಿಕ್ಷಣವಲ್ಲ. ಸಮಸ್ಯೆಗಳನ್ನು ಬಗೆಹರಿಸಲು, ಅಡೆತಡೆಗಳನ್ನು ನಿವಾರಿಸುವಲ್ಲಿ ಶಿಕ್ಷಣ ನೀತಿ ಸಹಾಯವಾಗಲಿದೆ. ಸುಮಾರು ಐದೂವರೆ ವರ್ಷಗಳ ದೀರ್ಘಕಾಲದ ಸಮಾಲೋಚನೆ ಹಾಗೂ ೩ ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಕ್ರೋಡೀಕರಿಸಿ ಎನ್.ಇ.ಪಿ. ಕರಡು ರೂಪಿಸಲಾಗಿದೆ. ಇದು ನಮ್ಮ ತನವನ್ನು ಉಳಿಸಿಕೊಂಡೇ ಜಾಗತಿಕ ಪೈಪೋಟಿಯಲ್ಲಿ ಯಶಸ್ವಿಯಾಗಬೇಕೆಂಬ ಆಶಯ ಹೊಂದಿದೆ. ಕನ್ನಡ ಭಾಷೆಗಾಗಲೀ ಅಥವಾ ನಮ್ಮ ಭಾರತದ ಇನ್ನಿತರ ಭಾಷೆಗಾಗಲೀ ಇದರಿಂದ ಧಕ್ಕೆಯಾಗುವುದಿಲ್ಲ. ಪದವಿ ಹಂತದಲ್ಲಿ ಎರಡು ವರ್ಷಗಳ ಅವಧಿಗೆ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿರುವುದರ ಜೊತೆಗೆ ಉನ್ನತ ಶಿಕ್ಷಣದ ಕೋರ್ಸ್ ಗಳನ್ನು ಪ್ರಾದೇಶಿಕ ಭಾಷೆಯಲ್ಲೂ ಕಲಿಸುವ ವ್ಯವಸ್ಥೆ ಜಾರಿಗೊಳ್ಳಲಿದೆ. ಈ ಕ್ರಮಗಳಿಂದಾಗಿ, ನಮ್ಮ ಭಾಷೆಗಳು ಮತ್ತಷ್ಟು ಬಲಗೊಳ್ಳಲಿವೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದರು.

ಅತ್ಯಾಚಾರ ಪ್ರಕರಣ: ಗೃಹ ಸಚಿವರ ನಡೆಗೆ ಆಕ್ರೋಶ

ಮೈಸೂರು, ಆ. ೨೭: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಬಗ್ಗೆ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿ ವಿವಾದಕ್ಕೆ-ಟೀಕೆಗೆ ಗುರಿಯಾಗಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವರ್ತನೆ ಮತ್ತಷ್ಟು ಚರ್ಚೆ, ಟೀಕೆಗಳಿಗೆ ಎಡೆಮಾಡಿಕೊಟ್ಟಿದೆ. ಇಡೀ ರಾಜ್ಯಾದ್ಯಂತ ಪ್ರಕರಣದ ಬಗ್ಗೆ ಆಕ್ರೋಶ, ಸರ್ಕಾರ, ಪೊಲೀಸ್ ಇಲಾಖೆ ಬಗ್ಗೆ ಟೀಕೆ ಕೇಳಿ ಬರುತ್ತಿರುವಾಗ ಗೃಹ ಸಚಿವರು ಮಾತ್ರ ಇಂದು ಕಾಟಾಚಾರಕ್ಕೆ ಅತ್ಯಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿ ನೋಡಿ ಹೋಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ತಮ್ಮ ಕಾರು, ಬೆಂಗಾವಲು ವಾಹನ, ಪೊಲೀಸ್ ಅಧಿಕಾರಿಗಳೊಂದಿಗೆ ಬಂದ ಗೃಹ ಸಚಿವರು ಕೇವಲ ಹತ್ತೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದು ಪರಿಶೀಲಿಸಿ ಹೋಗಿದ್ದಾರೆ. ರಸ್ತೆ ಬದಿ ನಿಂತು ಆ ಕಡೆ ಈ ಕಡೆ ನೋಡಿ, ಪೊಲೀಸ್ ಕಮಿಷನರ್‌ರಿಂದ ಮಾಹಿತಿ ಪಡೆದು ಹೋಗಿದ್ದಾರೆ.ಕೇವಲ ಪ್ರಚಾರಕ್ಕೆ, ಫೋಟೋ-ವೀಡಿಯೊಕ್ಕೆ ಫೋಸ್ ಕೊಡಲು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಂದ ಅಗ್ನಿಶಾಮಕ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಗೃಹ ಸಚಿವರು ಅಗ್ನಿಶಾಮಕ ಶಸ್ತಾçಸ್ತç ತರಬೇತಿ ಸಿಮ್ಯುಲೇಟರ್‌ನ್ನು ಪರಿಶೀಲಿಸಿದ್ದಾರೆ. ಅಂದರೆ ಪ್ರಕರಣವನ್ನು ಗಂಭೀರವಾಗಿ ಗೃಹ ಸಚಿವರು ಪರಗಣಿಸುತ್ತಿಲ್ಲವೇ ಎಂಬAತಿದೆ ಅವರ ನಡೆ ಎಂಬ ಮಾತುಗಳು ಕೇಳಿಬರುತ್ತಿದೆ. ಗೃಹ ಸಚಿವರ ಕಾರಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ನೋಡಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿದ್ದಾರೆ.

ಮೈಸೂರಿನ ದರೋಡೆ, ಶೂಟೌಟ್ ಪ್ರಕರಣದ ೬ ಆರೋಪಿಗಳ ಬಂಧನ

ಮೈಸೂರು, ಆ. ೨೭: ಮೈಸೂರಿನಲ್ಲಿ ನಡೆದ ದರೋಡೆ ಮತ್ತು ಶೂಟೌಟ್ ಪ್ರಕರಣಕ್ಕೆ ಸಂಬAಧಿಸಿದAತೆ ಮೊದಲು ೫ ಜನರನ್ನು ಬಂಧಿಸಲಾಗಿತ್ತು, ನಂತರ ಒಬ್ಬರನ್ನು ಬಂಧಿಸಲಾಯಿತು. ಈ ಘಟನೆಗೆ ಸಂಬAಧಿಸಿದAತೆ ಒಟ್ಟು ೬ ಮಂದಿಯನ್ನು ಬಂಧಿಸಲಾಗಿದೆ ಎಂದು ಮೈಸೂರಿನಲ್ಲಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ. ಈ ಕುರಿತು ಇಂದು ಮೈಸೂರಿನಲ್ಲಿ ಪ್ರವೀಣ್ ಸೂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ತಾ. ೨೩ ರಂದು ಮೈಸೂರಿನಲ್ಲಿ ಅಹಿತಕರ ಘಟನೆ ಆಗಿತ್ತು. ದರೋಡೆ ಮತ್ತು ಶೂಟೌಟ್ ಆಗಿತ್ತು. ಈ ಕೃತ್ಯಕ್ಕೆ ಕಂಟ್ರಿ ರಿವಾಲ್ವರ್ ಬಳಸಿದ್ದರು. ಆರೋಪಿಗಳ ಪತ್ತೆಗೆ ೫ ತಂಡಗಳನ್ನು ರಚಿಸಲಾಗಿತ್ತು. ನಾಲ್ಕು ದಿನಗಳ ನಂತರ ಇದುವರೆಗೂ ೬ ಮಂದಿಯನ್ನು ಬಂಧಿಸಲಾಗಿದೆ. ಯೋಜನೆ ರೂಪಿಸಿದ ನಂತರ ಇಬ್ಬರ ಬಂಧನವಾಗಿದೆ. ಒಬ್ಬರು ಮೈಸೂರು ಮತ್ತೊಬ್ಬರು ಬೆಂಗಳೂರಿನವರಾಗಿದ್ದಾರೆ. ವೆಸ್ಟ್ ಬೆಂಗಾಲ್, ಮುಂಬಯಿ, ರಾಜಸ್ಥಾನದಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ. ಆರನೇ ಆರೋಪಿಯನ್ನು ಜಮ್ಮು ಮತ್ತು ಕಾಶ್ಮೀರದಿಂದ ಬಂಧಿಸಲಾಗಿದೆ. ಆರೋಪಿಗಳು ದೇಶದ ೫ ಕಡೆಗೆ ಓಡಿ ಹೋಗಿದ್ದರು. ಆದರೂ ಅವರನ್ನು ಬಂಧಿಸಲಾಗಿದೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ. ಕಳ್ಳತನವಾದ ಬಹುತೇಕ ವಸ್ತುಗಳು ಸಿಕ್ಕಿವೆ. ಈ ಕೃತ್ಯವೆಸಗಿದ ೮ ದರೋಡೆಕೋರರಲ್ಲಿ ೬ ಜನರನ್ನು ಬಂಧಿಸಲಾಗಿದೆ ಎಂದರು.

ರಾಜ್ಯದಲ್ಲಿ ಮುಂದುವರೆದ ಕೊರೊನಾ ಏರಿಳಿತ

ಬೆಂಗಳೂರು, ಆ. ೨೭: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಇಂದು ೧,೩೦೧ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ೨೯,೪೪,೭೬೪ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೧೭ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೭,೨೪೮ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಇಂದು ೩೮೬ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೩೬,೬೧೫ಕ್ಕೆ ಏರಿಕೆಯಾಗಿದೆ. ೨ ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಂದು ೧,೬೧೪ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೮,೮೮,೫೨೦ಕ್ಕೆ ಏರಿಕೆಯಾಗಿದೆ. ಇನ್ನು ೧೮,೯೭೦ ಸಕ್ರಿಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೮೬,೯೦೦ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೧,೩೦೧ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೦.೬೯ಕ್ಕೆ ಇಳಿದಿದೆ.