ಮಡಿಕೇರಿ, ಆ. ೨೩: ಜಿಲ್ಲೆಯ ವಿವಿಧ ಕಾಫಿ ತೋಟಗಳಿಗೆ ಭೇಟಿ ನೀಡಿದ ಜಿಲ್ಲೆಯ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಅಸ್ಸಾಂ ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.

ಎರಡು ದಿನಗಳ ಹಿಂದೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿ ಜಯಕುಮಾರ್ ಅವರ ನೇತೃತ್ವದಲ್ಲಿ ಆನಂದಪುರ, ಎಮ್ಮೆಗುಂಡಿ, ಪಾಲಿಬೆಟ್ಟ, ಒಂಟಿಯAಗಡಿ, ಸಿದ್ದಾಪುರ ವ್ಯಾಪ್ತಿಗಳಲ್ಲಿರುವ ವಿವಿಧ ಕಾಫಿ ತೋಟಗಳಿಗೆ ಭೇಟಿ ನೀಡಿದ ಆಂತರಿಕ ಭದ್ರತಾ ವಿಭಾಗದ ತಂಡ ಅಲ್ಲಿಗೆ ಬಂದಿರುವ ಅಸ್ಸಾಂ ಕಾರ್ಮಿಕರ ಬಗ್ಗೆ ಮಾಹಿತಿ ಪಡೆಯಿತಲ್ಲದೆ, ಅವರುಗಳ ಭಾವಚಿತ್ರ, ಆಧಾರ್ ಕಾರ್ಡ್, ಮತದಾನದ ಗುರುತಿನ ಚೀಟಿ, ಎಷ್ಟು ದಿನ ಇಲ್ಲಿ ತಂಗಲಿದ್ದಾರೆ, ಅವರುಗಳಿಗೆ ನೀಡಲಾಗುವ ವೇತನ ಎಷ್ಟು ಎಂಬಿತ್ಯಾದಿ ಮಾಹಿತಿಗಳನ್ನು ಆಂತರಿಕ ಭದ್ರತಾ ವಿಭಾಗದ ಕಚೇರಿಗೆ ತಲುಪಿಸುವಂತೆ ಸಂಬAಧಿಸಿದವರಿಗೆ ಸೂಚನೆ ನೀಡಿತು. ಸಿಬ್ಬಂದಿಗಳಾದ ಹರೀಶ್, ಶಿವಪ್ರಕಾಶ್ ಈ ಸಂದರ್ಭ ಹಾಜರಿದ್ದರು.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಜಿಲ್ಲಾ ಆಂತರಿಕ ಭದ್ರತಾ ವಿಭಾಗದ ನಿರೀಕ್ಷಕರಾದ ಜಯಕುಮಾರ್ ಅವರು, ಕೊಡಗಿಗೆ ಹೊರ ರಾಜ್ಯಗಳಿಂದ ಕಾರ್ಮಿಕರು ಆಗಮಿಸುತ್ತಿರುವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಇಲಾಖೆ ವತಿಯಿಂದ ತೋಟಗಳಿಗೆ ಭೇಟಿ ನೀಡಿ ಹೊರ ರಾಜ್ಯಗಳ ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಮುಂದುವರಿಸಲಾಗುತ್ತದೆ ಎಂದರು.

ಅಲ್ಲದೇ ತೋಟ ಮಾಲೀಕರುಗಳು ತಮ್ಮಲ್ಲಿ ತಂಗಿರುವ ಅಸ್ಸಾಂ ಸೇರಿದಂತೆ ಹೊರ ರಾಜ್ಯಗಳ ಕಾರ್ಮಿಕರ ಸಂಪೂರ್ಣ ಮಾಹಿತಿಯ ವಿವರವನ್ನು ಮಡಿಕೇರಿಯಲ್ಲಿರುವ ಆಂತರಿಕ ಭದ್ರತಾ ವಿಭಾಗಕ್ಕೆ ತಲುಪಿಸಿ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಜಯಕುಮಾರ್ ಮನವಿ ಮಾಡಿದ್ದಾರೆ. ಪರ ರಾಜ್ಯಗಳಿಂದ ಜಿಲ್ಲೆಗೆ ಕಾರ್ಮಿಕರು ಆಗಮಿಸುತ್ತಿರುವ ಬಗ್ಗೆ ‘ಶಕ್ತಿ’ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.