ವೀರಾಜಪೇಟೆ, ಆ. ೨೨: ಮಹಿಳೆ ಇಂದು ಎಲ್ಲಾ ರಂಗದಲ್ಲಿಯೂ ಪುರುಷನಿಗೆ ಸರಿ ಸಮಾನವಾಗಿ ಸಾಧನೆಗೈಯುತ್ತಿದ್ದಾಳೆ ಎಂದು ಓ.ಡಿ.ಪಿ ಸಂಸ್ಥೆಯ ಮೈಸೂರು ನಿರ್ದೇಶಕ ಧರ್ಮಗುರು ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಅಭಿಪ್ರಾಯಪಟ್ಟರು.

ನಬಾರ್ಡ್ ಹಾಗೂ ಓ.ಡಿ.ಪಿ. ಸಂಸ್ಥೆಯ ಮಹಿಳೋದಯ ಮಹಿಳಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಒಕ್ಕೂಟದ ಸದಸ್ಯರಿಗೆ ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಹಿಳೆಯೊಬ್ಬಳು ಕಲಿತರೆ ಕುಟುಂಬವೇ ಕಲಿತಂತೆ.

ಮಹಿಳಾ ಸದಸ್ಯರ ಆರ್ಥಿಕ ಜೀವನದಲ್ಲಿ ಬದಲಾವಣೆಯಾಗಲು ಸ್ವಾವಲಂಬಿ ಬದುಕು ಸಾಧಿಸಬೇಕು. ಛಲದಿಂದ ಮುನ್ನಡೆದರೆ ಯಶಸ್ಸು ಸಾಧ್ಯ.

ದೇಶದಲ್ಲಿ ಸಿದ್ಧ ಉಡುಪುಗಳಿಗೆ ಬೇಡಿಕೆಯಿದ್ದು, ಹೊಲಿಗೆ ತರಬೇತಿ ಪಡೆದವರು ಮನೆಯಲ್ಲಿಯೇ ಹೊಲಿಗೆ ಕಾರ್ಯಕೈಗೊಳ್ಳುವ ಮೂಲಕ ಸ್ವಾವಲಂಬಿ ಬದುಕು ಸಾಗಿಸಬಹುದು ಎಂದರು.

ನಬಾರ್ಡ್ ಕೊಡಗು ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಮೇಶ್ ಬಾಬು ಮಾತನಾಡಿ, ಕುಟುಂಬದ ಅಭಿವೃದ್ಧಿಗೆ ಮಹಿಳೆಯ ಸಹಕಾರವೇ ಮುಖ್ಯ ಕಾರಣ.

ಸದಸ್ಯರ ಏಳಿಗೆಗೆ ಸಂಸ್ಥೆ ಸದಾ ಸಹಕಾರ ನೀಡುತ್ತಿದ್ದು. ಮಹಿಳಾ ಸದಸ್ಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದರು.

ಯೂನಿಯನ್ ಬ್ಯಾಂಕ್‌ನ ಉದ್ಯೋಗಿ ಅರ್ಚನ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಪಿ.ವಿ. ಶ್ರೀನಿವಾಸ್, ಮೈಸೂರು ಓ.ಡಿ.ಪಿ ಸಂಸ್ಥೆ ಮಹಿಳಾಭಿವೃದ್ಧಿ ಸಂಯೋಜಕರಾದ ಮೋಲಿ ಮಾತನಾಡಿದರು. ಕೌಶಲ್ಯಾಭಿವೃದ್ಧಿ ಯೋಜನಾ ಸಂಯೋಜಕಿ ಲಲಿತ, ಓಡಿಪಿಯ ಅಕ್ಷಯಾ, ಮೆಲ್ಸನ್ ಉಪಸ್ಥಿತರಿದ್ದರು, ಸಂಸ್ಥೆಯ ವಲಯ ಸಂಯೋಜಕಿ ಜಾಯ್ಸ್ ಮೆನೇಜಸ್ಸ್ ಸ್ವಾಗತಿಸಿದರು. ಕಾರ್ಯಕರ್ತೆ ರೀಟಾ ಜೋಸೆಫ್ ವಂದಿಸಿದರು.