ಮಡಿಕೇರಿ, ಆ. ೨೦: ಪ್ರಸ್ತುತ ಜಿಲ್ಲೆಯಲ್ಲಿ ಸಣ್ಣ ಕತೆಗಳ ಬರಹಗಾರರ ಕೊರತೆ ಉಂಟಾಗಿದೆ ಎಂದು ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅಭಿಪ್ರಾಯಪಟ್ಟರು.
ಇಲ್ಲಿನ ಲಿಟಲ್ ಫ್ಲವರ್ ವಿದ್ಯಾಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಲಾಗಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿ ಕಿಗ್ಗಾಲು ಗಿರೀಶ್, ಅವರು ಬರೆದ ಒಂದು ಹಳ್ಳಿಯ ಸುತ್ತ ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕತೆಗಳು ಸಣ್ಣದಾಗಿ ಸ್ಪಷ್ಟವಾಗಿರಬೇಕು. ಆದರೆ ಅಂತಹ ಕತೆಗಾರರ ಕೊರತೆ ಕಾಡುತ್ತಿದೆ. ಸಣ್ಣ ಕತೆಗಳು ದೀರ್ಘವಾದರೆ ಓದುವುದಕ್ಕೂ ಆಸಕ್ತಿ ಇರುವುದಿಲ್ಲ ಎಂದು ಹೇಳಿದರು. ಕೃತಿಗಳಲ್ಲಿ ಆಡು ಭಾಷೆ ಬಳಕೆ ಅನಿವಾರ್ಯ. ಅಂತಹ ಕೆಲವು ಪದಗಳನ್ನು ಗಿರೀಶ್ ತಮ್ಮ ಕಾದಂಬರಿಯಲ್ಲಿ ಬಳಸಿದ್ದಾರೆ. ಕಾದಂಬರಿ ಕತೆಗಳಲ್ಲಿ ಮಾತ್ರ ಆಡು ಭಾಷೆಯನ್ನು ಬಳಸಬಹುದಾಗಿದ್ದು, ಅಧ್ಯಯನಶೀಲ ಗ್ರಂಥಗಳಲ್ಲಿ ಬಳಸುವುವಂತಿಲ್ಲ ಎಂದು ಹೇಳಿದರು.
ಲೇಖಕಿ ಪೂಜಾರೀರ ಕೃಪಾ ದೇವರಾಜ್ ಅವರ ‘ಮರ್ಮರ’ ಕಥಾ ಸಂಕಲವನ್ನು ಫೀ.ಮಾ. ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ್ ಹೆಗಡೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಸಾಹಿತ್ಯದಲ್ಲಿ ಮೂರು ವಿಧಗಳಿದ್ದು ಶ್ರೇಷ್ಠ, ಮಧ್ಯಮ ಹಾಗೂ ಅಧನ ಎಂದು ವಿಂಗಡಿಸಲಾಗಿದೆ. ಶ್ರೇಷ್ಠ ಸಾಹಿತ್ಯ ನೂರು ವರ್ಷಗಳಾದರೂ ಜೀವಂತವಿರುತ್ತವೆ. ಮಾಧ್ಯಮ ವರ್ಗದ ಸಾಹಿತ್ಯ ಕೆಲ ದಿನಗಳಿದ್ದರೆ, ಅಧನ ವರ್ಗವನ್ನು ಓದಿದ ಕೂಡಲೇ ಮರೆತು ಬಿಡುತ್ತಾರೆ ಹಾಗಾಗಿ ಸಾರ್ವಕಾಲಿಕ ಸತ್ಯವನ್ನು ಹೇಳುವ ಕತೆಗಳು ಶಾಶ್ವತವಾಗಿ ಬದುಕುತ್ತವೆ. ಅಂತಹ ಕತೆಗಳನ್ನು ಕೃಪಾ ತಮ್ಮ ಕತೆಗಳಲ್ಲಿ ಕಟ್ಟಿದ್ದಾರೆ ಎಂದು ಹೇಳಿದರು.
ಸಾಹಿತ್ಯಕ್ಕೆ ಚೌಕಟ್ಟು ಇರಬೇಕು. ವಿಷಯ, ಘಟನೆಗಳು ವಸ್ತುಗಳಾಗಿರುತ್ತವೆ. ಚೌಕಟ್ಟಿನೊಳಗಡೆ ರಚನೆಯಾಗುವ ಸಾಹಿತ್ಯ ಗುರುತಿಸಿಕೊಳ್ಳುತ್ತದೆ ಎಂದರು.
ಕ.ಸಾ.ಪ. ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ ಕೆಲವೇ ದಿನಗಳ ಅಂತರದಲ್ಲಿ ಆರು ಕೃತಿಗಳು ಬಿಡುಗಡೆಯಾಗಿವೆ. ಇನ್ನೂ ನಾಲ್ಕು ದಿನಗಳಲ್ಲಿ ಮತ್ತೆರಡು ಕೃತಿಗಳು ಬಿಡುಗಡೆಗೆ ಸಿದ್ಧವಾಗಿದೆ. ಇದರಿಂದ ಸಾರಸ್ವತ ಲೋಕದಲ್ಲಿ ಕೊಡಗು ಮೇಲಕ್ಕೇರುತ್ತಿದ್ದು, ಹಿಂದೊಮ್ಮೆ ಕೊಡಗು ಸಾಹಿತ್ಯ ಕ್ಷೇತ್ರದಲ್ಲಿ ಬರಡು ಎಂಬ ಮಾತನ್ನು ಹೋಗಲಾಡಿಸುವಂತಾಗಿದೆ ಎಂದು ಹೇಳಿದರು. ಸಾಕಷ್ಟು ಯುವಪೀಳಿಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ನಮ್ಮ ಈಗಿನ ತಂಡ ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಹೊಸ ಕಾರ್ಯಕ್ರಮಗಳನ್ನು ನೀಡುವುದರೊಂದಿಗೆ ಬಹುಮಾನ, ಸನ್ಮಾನಗಳನ್ನು ಕೊಡಗು ಕ.ಸಾ.ಪ. ಪಡೆದುಕೊಳ್ಳುವಂತಾಗಿದೆ. ಇನ್ನೆರಡು ದಿನಗಳಲ್ಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದವರನ್ನು ಪರಿಚಯಿಸುವ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಪ್ರಾರಂಭಿಸಲಿದ್ದು, ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
ಲಿಟಲ್ ಫ್ಲವರ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕಿ ಪರ್ಲಕೋಟಿ ಸುನಿತಾ ಪ್ರೀತು ಇದ್ದರು. ಲೇಖಕರುಗಳಾದ ಕಿಗ್ಗಾಲು ಗಿರೀಶ್ ಹಾಗೂ ಕೃಪಾ ದೇವರಾಜ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕಿ ಸುನಿತಾ ಗಿರೀಶ್ ಅವರ ಕಾದಂಬರಿಯನ್ನು ಹಾಗೂ ಕೆ.ವಿ. ಕವಿತಾ ಕೃಪಾ ಅವರ ಕಥಾ ಸಂಕಲನವನ್ನು ಸಭಿಕರಿಗೆ ಪರಿಚಯಿಸಿದರು.
ಚೊಕ್ಕಾಡಿ ಪ್ರೇಮಾ ರಾಘವಯ್ಯ ಪ್ರಾರ್ಥಿಸಿದರೆ, ಕಡ್ಲೇರ ತುಳಸಿ ಮೋಹನ್ ಸ್ವಾಗತಿಸಿದರು. ತಳೂರು ಉಷಾರಾಣಿ ನಿರೂಪಿಸಿದರೆ, ಲಿಟಲ್ ಫ್ಲವರ್ ಶಾಲೆಯ ಶಿಕ್ಷಕಿ ಶ್ಯಾಮಲಾ ವಂದಿಸಿದರು.