ಮಡಿಕೇರಿ, ಆ. ೨೦: ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಮಿತಿ ರಚನೆಯ ಬಗ್ಗೆ ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸಿ ವಿಶ್ವವಿದ್ಯಾನಿಲಯದ ಕುಲಸಚಿವರಿಗೆ ಪತ್ರ ಬರೆದಿದ್ದಾರೆ.
ಹಿರಿಯ ಸಾಹಿತಿಗಳಾದ ಡಾ. ಉಳ್ಳಿಯಡ ಎಂ. ಪೂವಯ್ಯ, ಬಾಚರಣಿಯಂಡ ರಾಣು ಅಪ್ಪಣ್ಣ, ಬಾಚರಣಿಯಂಡ ಪಿ. ಅಪ್ಪಣ್ಣ, ಅಜ್ಜಿನಿಕಂಡ ಮಹೇಶ್ ನಾಚಯ್ಯ, ಉಳ್ಳಿಯಡ ಡಾಟಿ ಪೂವಯ್ಯ, ಮುಲ್ಲೇಂಗಡ ಮುಧೋಶ್ ಪೂವಯ್ಯ, ಮುಲ್ಲೇಂಗಡ ರೇವತಿ ಪೂವಯ್ಯ ಅವರುಗಳು ಸಮಿತಿಯನ್ನು ಕೊಡವ ಭಾಷಿಕರು ಸೇರಿದಂತೆ ಸಮರ್ಥ ಸದಸ್ಯರನ್ನು ಸೇರಿಸಿಕೊಂಡು ಕೂಡಲೇ ಪುನರ್ ರಚಿಸಬೇಕೆಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಅಧ್ಯಯನಪೀಠ ಉನ್ನತ ಶೈಕ್ಷಣಿಕ ಜಾಗೃತಿಯ ಸಂಸ್ಥೆಯಾಗಿರುವಾಗ ಅದಕ್ಕೆ ನೇಮಕವಾಗುವ ಸದಸ್ಯರುಗಳು ಅಧ್ಯಯನಶೀಲರೂ, ಸಂಶೋಧನಾಸಕ್ತರೂ, ಆ ಕ್ಷೇತ್ರದಲ್ಲಿ ಪಳಗಿದವರೂ, ಮುಂದಾಲೋಚನೆ ಇರುವವರು ಆಗಿರಬೇಕು. ಆದರೆ, ಈ ಬಾರಿ ಸಮಿತಿಯಲ್ಲಿರುವವರಿಗೆ ಇದ್ಯಾವುದು ಗುಣಗಳಿಲ್ಲ. ಇದು ಭಾಷೆ ಮತ್ತು ಸಂಸ್ಕೃತಿಗೆ ಮಾಡಿದ ಅಪಮಾನ ಎಂದು ಹೇಳಿದ್ದಾರೆ.