ಮಡಿಕೇರಿ, ಆ.೨೦ : ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜ ಅರಸು ಅವರು ಎಲ್ಲರ ವಿಶ್ವಾಸದ ನಾಯಕರಾಗಿ ಜನಮಾನಸದಲ್ಲಿ ಉಳಿದು ಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಹೇಳಿದರು.

ಕೊಡಗು ಜಿಲ್ಲಾ ಅಹಿಂದ ಒಕ್ಕೂಟ ಮತ್ತು ಸಹಮತ ವೇದಿಕೆಯ ಜಂಟಿ ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ದಿ.ಡಿ.ದೇವರಾಜ ಅರಸು ಅವರ ೧೦೬ನೇ ಜನ್ಮದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿ.ದೇವರಾಜ ಅರಸು ಅವರು ಶಾಸಕ ಸ್ಥಾನದಿಂದ ಮಂತ್ರಿ ಪದವಿ ಅಲಂಕರಿಸಿದ್ದು ಮಾತ್ರವಲ್ಲದೆ, ೭ ವರ್ಷಗಳಿಗೂ ಅಧಿಕ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ದೇವರಾಜ ಅರಸು ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ತಮ್ಮ ಆಡಳಿತಾ ವಧಿಯಲ್ಲಿ ಅನೇಕ ಯೋಜನೆಗಳನ್ನು, ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ

(ಮೊದಲ ಪುಟದಿಂದ) ಸಾಮಾಜಿಕ ಪರಿವರ್ತನೆಗೆ ಕಾರಣಕರ್ತರು. ಕನ್ನಡ ನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಅರಸು ಅವರು ಅಧಿಕಾರ, ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಹೋದ ಪರಿವರ್ತನೆಯ ಹರಿಕಾರ ಎಂದು ಬಣ್ಣಿಸಿದರು.

ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮಾಜಿ ಅಭಿಯೋಜಕರು ಹಾಗೂ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಹೆಚ್.ಎಸ್.ಚಂದ್ರಮೌಳಿ ಅವರು ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಿದರು. ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಎ.ಎಸ್.ಪೊನ್ನಣ್ಣ "ಹಿಂದುಳಿದ ವರ್ಗಗಳ ಅಭ್ಯುದಯಕ್ಕೆ ಇರುವ ಕಾನೂನಿನ ತೊಡಕುಗಳು" ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭ ಹಿರಿಯ ಕಾರ್ಮಿಕ ನಾಯಕ ಪಿ.ಆರ್.ಭರತ್, ಗಾಯಕ ಎಂ.ಎA.ಲಿಯಾಖತ್ ಆಲಿ, ಸಮಾಜ ಸೇವಕ ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಒಕ್ಕೂಟದ ಸದಸ್ಯರಾದ ಕೆ.ಟಿ.ಬೇಬಿ ಮ್ಯಾಥ್ಯು ಸ್ವಾಗತಿಸಿದರು, ಮುನೀರ್ ಅಹಮ್ಮದ್ ನಿರೂಪಿಸಿದರು, ಅಂಬೆಕಲ್ ನವೀನ್ ವಂದಿಸಿದರು. ಪ್ರಮುಖರಾದ ಅಬ್ದುಲ್ಲ, ವಿಲ್‌ಫ್ರೆಡ್ ಕ್ರಾಸ್ತಾ, ಸುರಯ್ಯ ಅಬ್ರಾರ್ ಸನ್ಮಾನಿತರ ಪರಿಚಯ, ಮತ್ತು ಅತಿಥಿಗಳ ಪರಿಚಯವನ್ನು ಮಿನಾಜ್ ಪ್ರವೀಣ್ ಹಾಗೂ ಎಂ.ಇ.ಮೊಹಿದ್ದಿನ್ ಮಾಡಿದರು.