ವೀರಾಜಪೇಟೆ, ಆ. ೧೯: ಮಠಾಧೀಶರು, ಸ್ವಾಮೀಜಿಗಳು ಮುಂದೆ ಬಂದಲ್ಲಿ ಸಮಾಜದ ಸುಧಾರಣೆ ಮತ್ತು ಅಭಿವೃದ್ಧಿ ಸಾಧ್ಯ ಎಂದು ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆ ಬಳಿಯ ಅರಮೇರಿ ಕಳಂಚೇರಿ ಮಠದ ದಿವಂಗತ ಶ್ರೀ ಶಾಂತ ಮಲ್ಲಸ್ವಾಮೀಜಿ ಅವರ ೨೪ನೇ ಪುಣ್ಯಸ್ಮರಣೆಯ ಅಂಗವಾಗಿ ಮಠದ ಎಸ್.ಎಂ.ಎಸ್. ವಿದ್ಯಾಪೀಠದ ಸಭಾಂಗಣದಲ್ಲಿ ಆಯೋಜಿಸಿದ್ದ ವಚನಾಮೃತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡುವಂತಾಗಬೇಕು ಆಗ ಮಾತ್ರ ಸಮಾಜ ಬದಲಾಗಲು ಸಾಧ್ಯವಾದೀತು ಎಂದರು.

ಅರಮೇರಿ ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದೀಪ ಬೆಳಗಿಸಿ ಮಾತನಾಡಿ, ಜಗತ್ತಿನ ನಿಯಮವನ್ನು ಎಲ್ಲರೂ ಪಾಲಿಸಬೇಕು. ಗುರುವಿನ ಮೂಲಕ ಕಲಿಯುವ ವಿದ್ಯೆಗಳು ಸಾಕಷ್ಟಿವೆ ಎಂದರು. ಬಸವಪಟ್ನ ಮಹಾ ಸಂಸ್ಥಾನದ ಸ್ವತಂತ್ರ ಬಸವಲಿಂಗ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮನೆಹಳ್ಳಿ ಮಠದ ಮಹಂತ ಶಿವಲಿಂಗ ಸ್ವಾಮಿ, ಚಿಲುಮೆ ಮಠದ ಶ್ರೀಗಳು, ವೀರಾಜಪೇಟೆ ವಕೀಲ ನರೇಂದ್ರ ಕಾಮತ್, ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಉಮಾಪತಿ, ಕೆ.ಆರ್. ನಗರ ಬಸವರಾಜು ಸ್ವಾಮಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಕೆ.ಪಿ. ಕುಸುಂ ಸ್ವಾಗತಿಸಿ, ಎಸ್. ಸೀಮಾ ನಾಯರ್ ವಂದಿಸಿದರು.