ಕೂಡಿಗೆ, ಆ. ೧೯: ಕೂಡಿಗೆ ಕ್ರೀಡಾ ಪ್ರೌಢಶಾಲಾ ಬಾಲಕರ ವಸತಿ ನಿಲಯದ ನವೀಕರಣಕ್ಕೆ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರೂ. ೪೯.೫೦ ಲಕ್ಷ ಮಂಜೂರಾಗಿ ವಸತಿ ನಿಲಯದ ನೆಲಮಹಡಿಯ ನವೀಕರಣ ಮತ್ತು ದುರಸ್ತಿ ಕಾಮಗಾರಿಯ ಪ್ರಾರಂಭಕ್ಕೆ ಅನುಮೋದನೆಯು ಇಲಾಖೆಯಿಂದ ದೊರೆತಿದೆ.

ಕಳೆದ ತಿಂಗಳು ರಾಜ್ಯ ಕ್ರೀಡಾ ಸಚಿವ ಮತ್ತು ಇಲಾಖೆಯ ಆಯುಕ್ತರು ಕೂಡಿಗೆ ಕ್ರೀಡಾ ಶಾಲೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದರು.

ಅದರಲ್ಲಿ ಪ್ರಮುಖವಾಗಿ ಬಾಲಕರ ವಸತಿ ಗೃಹದ ಅವ್ಯವಸ್ಥೆಯ ನೋಡಿ ಶೀಘ್ರವಾಗಿ ದುರಸ್ತಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅದರಂತೆ ರಾಜ್ಯಮಟ್ಟದ ಅಧಿಕಾರಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿ ಕೂಡಿಗೆಯ ಕ್ರೀಡಾ ಶಾಲೆಯ ಬಾಲಕರ ವಸತಿ ನಿಲಯದ ನೆಲಮಹಡಿಯ ನವೀಕರಣ ಮತ್ತು ದುರಸ್ತಿಗೆ ಸಂಬAಧಿಸಿದAತೆ ಕ್ರಿಯಾ ಯೋಜನೆ ತಯಾರಿಸಿ ಅದರ ಅನುಗುಣವಾಗಿ ಕಾಮಗಾರಿಯನ್ನು ನಿರ್ವಹಿಸಲು ಬೆಂಗಳೂರಿನ ಕೆ.ಆರ್.ಐ.ಡಿ.ಎನ್. ಸಂಸ್ಥೆಗೆ ಈಗಾಗಲೇ ವಹಿಸಲಾಗಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿಯನ್ನು ಅರಂಭ ಮಾಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೂಚನೆ ನೀಡಿದೆ.

ಅಧಿಕಾರಿ ವಸತಿ ಗೃಹಗಳ ನವೀಕರಣ, ದುರಸ್ತಿಗೆ ಕ್ರೀಡಾ ಇಲಾಖೆಯ ವಿಶೇಷ ಅನುದಾನದಲ್ಲಿ ರೂ. ೩೫ ಲಕ್ಷವನ್ನು ಬಿಡುಗಡೆಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಅಧಿಕಾರಿಗಳ ವಸತಿ ಗೃಹಗಳ ದುರಸ್ತಿ ಕಾರ್ಯವು ನಡೆಯಲಿದೆ ಎಂದು ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ದೇವಕುಮಾರ್ ತಿಳಿಸಿದ್ದಾರೆ.