ವೀರಾಜಪೇಟೆ, ಆ. ೧೮: ಕ್ಷÄಲ್ಲಕ ಕಾರಣಕ್ಕೆ ಜಗಳವಾಗಿ ಅಣ್ಣನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ತಮ್ಮ ಆಸ್ಪತ್ರೆಗೆ ದಾಖಲಾದ ಘಟನೆ ಶಿವಕೇರಿಯಲ್ಲಿ ನಡೆದಿದೆ. ಅಣ್ಣ ಜೈಲು ಪಾಲಾಗಿದ್ದಾನೆ.
ಶಿವಕೇರಿ ನಿವಾಸಿ ಪುಟ್ಟುಸ್ವಾಮಿ ಎಂಬವರ ದ್ವಿತೀಯ ಪುತ್ರ ಅಭಿಷೇಕ್ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿ. ಶಿವಕೇರಿ ನಿವಾಸಿ ಪುಟ್ಟುಸ್ವಾಮಿ ದಂಪತಿಗಳಿಗೆ ಇಬ್ಬರು ಪುತ್ರರು, ಪ್ರಥಮ ಪುತ್ರ ಮಧುಸೂಧನ್ (೩೦) ದ್ವಿತೀಯ ಪುತ್ರ ಅಭಿಷೇಕ್ (೨೪) ಮದುವೆಯಾಗಿದ್ದು, ಪೋಷಕರು ನೀಡಿರುವ ಜಾಗದಲ್ಲಿ ಇಬ್ಬರು ಮಕ್ಕಳು ಪ್ರತ್ಯೇಕವಾಗಿ ಮನೆ ನಿರ್ಮಿಸಿಕೊಂಡು ವಾಸವಿದ್ದಾರೆ. ತಾ. ೧೬ರಂದು ಅಣ್ಣ ಮಧುಸೂದನ್ ದನಕರುಗಳನ್ನು ಕೊಟ್ಟಿಗೆಯಲ್ಲಿ ಸೇರಿಸಲು ಕರೆದುಕೊಂಡು ಹೋಗಿದ್ದಾನೆ. ಕೊಟ್ಟಿಗೆ ಬಳಿ ಬಂದ ತಮ್ಮ ಅಭಿಷೇಕ್ ಇದಕ್ಕೆ ಚಕಾರವೆತ್ತಿದ್ದಾನೆ. ಸಹೋದರರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೋಪದಿಂದ ಅಣ್ಣ ಮಧುಸೂದನ್ ಗದ್ದೆಯಲ್ಲಿ ಬಳಸುವ ಕೊಕ್ಕೆ ಕತ್ತಿಯಿಂದ ತಮ್ಮ ಅಭಿಷೇಕ್‌ನ ಬೆನ್ನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿದ್ದ ಅಭಿಷೇಕ್‌ನನ್ನು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ಅಭಿಷೇಕ್ ನೀಡಿದ ದೂರಿನ ಮೇರೆಗೆ ಮಧುಸೂದನ್ ವಿರುದ್ಧ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಧುಸೂದನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೊಳ ಪಡಿಸಲಾಗಿದೆ.
- ಕೆ.ಕೆ.ಎಸ್.