ಮಡಿಕೇರಿ, ಆ. ೧೮: ೨೦೨೧ ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆ ಇಂದು ನಡೆಯಲಿದ್ದು ಜಿಲ್ಲೆಯ ಒಟ್ಟು ೨೩೬ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಕೋವಿಡ್ ಕಾರಣ ಪರೀಕ್ಷೆಗಳಿಲ್ಲದೆಯೇ ವಿದ್ಯಾರ್ಥಿಗಳನ್ನು ೧೦ನೇ ತರಗತಿ ಹಾಗೂ ಮೊದಲನೆಯ ಪಿ.ಯು ವಿನಲ್ಲಿ ಪಡೆದ ಅಂಕಗಳ ಅನುಸಾರ ದ್ವಿತೀಯ ಪಿ.ಯು.ಸಿ ಅಂಕಗಳನ್ನು ನೀಡಿ ಸರಕಾರದ ವತಿಯಿಂದ ಉತ್ತೀರ್ಣ ಗೊಳಿಸಲಾಗಿತ್ತು. ಫಲಿತಾಂಶದಲ್ಲಿ ತೃಪ್ತಿಯಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆದು ಅಂಕಗಳನ್ನು ಹೆಚ್ಚಿಸುವ ಅವಕಾಶವನ್ನು ಸರಕಾರ ನೀಡಿತ್ತು. ಜಿಲ್ಲೆಯಿಂದ ಈ ಪೈಕಿ ೮ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಇಂದು ಪರೀಕ್ಷೆ ಎದುರಿಸಲಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಮೊದಲು ನೀಡಿದ ಫಲಿತಾಂಶ ನಗಣ್ಯವಾಗಲಿದೆ.
೨೨೮ ಖಾಸಗಿ ವಿದ್ಯಾರ್ಥಿಗಳು
ಖಾಸಗಿಯಾಗಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದನ್ನು ಸರಕಾರ ಕಡ್ಡಾಯಗೊಳಿಸಿದ್ದು, ೨೩೬ ವಿದ್ಯಾರ್ಥಿಗಳ ಪೈಕಿ ೨೨೮ ಮಂದಿ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
೩ ಕೇಂದ್ರಗಳಲ್ಲಿ ಪರೀಕ್ಷೆ
ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆಯ ಸರಕಾರಿ ಪದವಿಪೂರ್ವ ಕಾಲೇಜು ಗಳಲ್ಲಿ ತಾ.೧೯ (ಇಂದು) ರಿಂದ ಸೆ.೩ ರವರೆಗೆ ಪರೀಕ್ಷೆಗಳು ನಡೆಯಲಿವೆ. ಸೋಮವಾರಪೇಟೆ ಪ.ಪೂ ಕಾಲೇಜಿನಲ್ಲಿ ೧೩೭, ವೀರಾಜಪೇಟೆ ಪ.ಪೂ ಕಾಲೇಜಿನಲ್ಲಿ ೬೩ ಹಾಗೂ ಮಡಿಕೇರಿ ಪ.ಪೂ ಕಾಲೇಜಿನಲ್ಲಿ ೩೬ ವಿದ್ಯಾರ್ಥಿಗಳು ಸೇರಿ ಒಟ್ಟು ೨೩೬ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ವಿಷ್ಣುಮೂರ್ತಿ ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿತ ವಿದ್ಯಾರ್ಥಿಗಳಿಗೆ ಆ್ಯಂಬುಲೆನ್ಸ್ ಮೂಲಕ ವಿಶೇಷ ವ್ಯವಸ್ಥೆ ಮಾಡಿ ಪರೀಕ್ಷಾ ಕೇಂದ್ರಗಳಲ್ಲಿನ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿದೆ. ನೆಗಡಿ, ಕೆಮ್ಮು ಇದ್ದರೂ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆಯಿದೆ. ಆದರೆ ಪ್ರಸ್ತುತ ಯಾವುದೇ ವಿದ್ಯಾರ್ಥಿಗಳಲ್ಲಿಯೂ ಕೋವಿಡ್ ಸೋಂಕು ಇಲ್ಲ ದಿರುವುದಾಗಿ ವಿಷ್ಣುಮೂರ್ತಿ ಅವರು ಮಾಹಿತಿ ನೀಡಿದ್ದಾರೆ.
ಗಡಿ ಭಾಗಗಳಿಂದ ಬರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ೭೨ ಗಂಟೆಯೊಳಗಿನ ಮುಂಚಿತವಾಗಿ ಪಡೆದ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಪಡೆದುಕೊಂಡು ಬರೆಬೇಕಾಗಿದ್ದು, ಈ ವರದಿಯನ್ನೇ ೧ ವಾರಗಳ ಕಾಲ ಪರಿಗಣಿಸ ಲಾಗುತ್ತದೆ. ಪರೀಕ್ಷಾ ಕೇಂದ್ರಗಳÀ ಸುತ್ತ ೨೦೦ ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿ ಘೋಷಿಸಿದ್ದಾರೆ.