ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಬರವಣಿಗೆಯ ಮೂಲಕ ಅಭಿವ್ಯಕ್ತಿಸುವ ವಿಷಯಗಳನ್ನು ಕೇವಲ ಒಂದು ಛಾಯಾ ಚಿತ್ರ ಕ್ಷಣಮಾತ್ರದಲ್ಲಿ ವಿವರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಒಂದು ಘಟನೆಯ ಅತ್ಯಮೂಲ್ಯ ದಾಖಲೆಯಾಗಿ ಛಾಯಾಚಿತ್ರ ಉಳಿದುಕೊಳ್ಳುತ್ತದೆ. ಇಷ್ಟು ಮಾತ್ರವಲ್ಲ. ಗತಕಾಲದ ನೆನಪುಗಳು, ಸಂತಸದ ಕ್ಷಣಗಳು ಸಂಭ್ರಮದ ಘಳಿಗೆಗಳು ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡುವಲ್ಲಿ ಛಾಯಾಗ್ರಹಣದ ಪಾತ್ರ ಮಹತ್ವದ್ದು. ಅಂತೆಯೇ ಛಾಯಾಗ್ರಾಹಕರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ. ಛಾಯಾಚಿತ್ರದ ಮೂಲಕ ವಿಶ್ವವನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಆರಂಭವಾದ ವಿಶ್ವ ಛಾಯಾಗ್ರಹಣ ದಿನವನ್ನು ಇಂದು ವಿಶ್ವಛಾಯಾಗ್ರಾಹಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ೧೯೩೯ ರ ಆಗಸ್ಟ್ ೧೯ ರಂದು ಮೊದಲ ಬಾರಿಗೆ ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಯಿತು.
ಒಂದಲ್ಲ ಒಂದು ಕಾರಣಕ್ಕೆ ಪ್ರತಿಯೊಬ್ಬರೂ ಛಾಯಾಚಿತ್ರಗಾರರನ್ನು ಅವಲಂಬಿಸಬೇಕಾಗಿರುವ ಇಂದಿನ ದಿನಗಳಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಮಹತ್ವದ್ದೆ. ಉತ್ತಮ ಛಾಯಾಗ್ರಹಣಕ್ಕೆ ಒಂದು ಉತ್ತಮ ಕ್ಯಾಮೆರಾವೂ ಅವಶ್ಯಕ. ಮೊದಲು ಕಪ್ಪು-ಬಿಳುಪು ಛಾಯಾಚಿತ್ರಗಳ ಕಾಲವಿತ್ತು. ಇದೀಗ ವರ್ಣಚಿತ್ರಗಳ ಕಾಲ. ಹಾಗೆಂದು ನೆರಳು ಬೆಳಕಿನ ಸಂಯೋಜನೆಯ ಕಪ್ಪುಬಿಳುಪು ಚಿತ್ರಗಳಿಗೂ ಅಷ್ಟೇ ಮಹತ್ವವಿದೆ. ತಾಂತ್ರಿಕತೆಯಲ್ಲಿ ಬಹಳಷ್ಟು ಮುಂದುವರೆದಿರುವುದರಿAದ ಹಿಂದೆ ದುಬಾರಿ ಬೆಲೆಯ ಕ್ಯಾಮರಾದಿಂದ ತೆಗೆದ ಫೋಟೋಗಿಂತಲೂ ಇಂದಿನ ಕಡಿಮೆ ಬೆಲೆಯ ಮೊಬೈಲ್‌ನಲ್ಲಿ ತೆಗೆದ ಚಿತ್ರ ಉತ್ತಮವಾಗಿರುತ್ತದೆ.
ಜಗತ್ತಿನ ವಿಸ್ಮಯ, ನೈಜ ಚಿತ್ರಣಗಳನ್ನು ಸೆರೆ ಹಿಡಿಯುವ ಛಾಯಾಗ್ರಹಣ ಅತ್ಯಂತ ಸವಾಲಿನ ಹಾಗೂ ಸೃಜನಾತ್ಮಕ ಕಲೆ ಅಥವಾ ವೃತ್ತಿ. ಸುಮಾರು ಹತ್ತು ವರ್ಷಗಳ ಹಿಂದಿನವರೆಗೂ ಕ್ಯಾಮೆರಾ ವೃತ್ತಿಪರರ ಸೊತ್ತಾಗಿತ್ತು. ಡಿಜಿಟಲ್ ತಂತ್ರಜ್ಞಾನದ ಮೂಲಕ ಇದು ಮೊಬೈಲ್‌ಗಳಿಗೆ ಇಳಿದಿದ್ದೆ ತಡ ದುಬಾರಿ ಕ್ಯಾಮೆರಾಗಳು ಮೂಲೆ ಗುಂಪಾದವು. ಜನಸಾಮಾನ್ಯರ ಕೈಗೂ ಎಟುಕುವಂತಾದ ಬಳಿಕ ಕ್ಯಾಮೆರಾ ಇಲ್ಲದ ವ್ಯಕ್ತಿಯೇ ಇಲ್ಲದಂತಾಗಿದೆ. ಆದರೆ ಇದರಿಂದ ವೃತ್ತಿಪರರು ಸಮಸ್ಯೆ ಎದುರಿಸುವಂತಾಗಿದೆ. ಜೊತೆಗೆ ಕೋವಿಡ್ ಸಾಂಕ್ರಾಮಿಕ ಸೋಂಕಿನಿAದಾಗಿ ಜನಜೀವನದಲ್ಲಿ ಏರುಪೇರಾಗಿದ್ದು ಛಾಯಾಗ್ರಾಹಕರೂ ಸಮಸ್ಯೆ ಎದುರಿಸುವಂತಾಗಿದೆ. ಸ್ಮೆöÊಲ್ ಪ್ಲೀಸ್ ಎಂದು ಇತರರ ಮೊಗದಲ್ಲಿ ನಗು ತರಿಸುತ್ತಿದ್ದವರ ಬದುಕು ಏರುಪೇರಾಗಿದೆ. ಕಾರ್ಯಕ್ರಮಗಳಿಲ್ಲದೇ ಛಾಯಾಚಿತ್ರ ತೆಗೆಯುವ ಕಾಯಕಕ್ಕೂ ಹೊಡೆತ ಬಿದ್ದಿದೆ. ಮತ್ತೆ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಆಶಾಭಾವನೆಯನ್ನು ಹೊಂದಿರುವ ಛಾಯಾಚಿತ್ರಕಾರರಿಗೆ ವಿಶ್ವ ಛಾಯಾಗ್ರಹಣ ದಿನದ ಶುಭಾಶಯಗಳು.
- ಸುನಿಲ್ ಕುಯ್ಯಮುಡಿ