ಕೊಯಮತ್ತೂರಿನ ಆಲಂಬಾಡಿಯ ಬಳಿ ನದಿಯ ಪ್ರವಾಹದ ನಡುವೆ ಅಡ್ಡ ಬರುವ ಬಂಡೆಗೆ ತಾಕಿ ತುಂತುರು ಹನಿಗಳನ್ನು ನಿರಂತರವಾಗಿ ಚಿಮ್ಮಿಸುತ್ತದೆ. ತಿರುಚ್ಚರಪ್ಪಳ್ಳಿಯ ಪ್ರಸಿದ್ಧವಾದ ಬಂಡೆಯನ್ನು ದಾಟಿದ ಮೇಲೆ ಕಾವೇರಿ ಮತ್ತೆ ಕವಲೊಡೆಯುತ್ತದೆ. ಇದರಿಂದ ಸಂಭವಿಸಿರುವ ದ್ವೀಪವೇ ಶ್ರೀರಂಗA. ಎರಡು ಕವಕಲುಗಳೂ ತಿರುಚ್ಚಿರಪ್ಪಳ್ಳಿಯಿಂದ ೧೬ ಕಿ. ಮೀ. ದೂರದಲ್ಲಿ ಮತ್ತೆ ಸೇರುತ್ತವೆ. ಮಹಾ ಅಣೆಕಟ್ಟೆಯ (ಗ್ರಾö್ಯಂಡ್ ಬ್ರಿಡ್ಜ್) ನಿರ್ಮಾಣವಾಗಿರುವುದು ಈ ಸ್ಥಳದಲ್ಲಿ. ತಂಜಾವೂರು ಜಿಲ್ಲೆಯ ಮಹಾ ನೀರಾವರಿ ವ್ಯವಸ್ಥೆಗೆ ಇದೇ ಮೂಲ. ಇಲ್ಲಿಯದ್ದು ಭಾರತದಲ್ಲೇ ಅತ್ಯಂತ ಪ್ರಾಚೀನವಾದ ನೀರಾವರಿ ವ್ಯವಸ್ಥೆ (೨ನೆಯ ಶತಮಾನ). ಕುಂಭಕೋಣA, ಮಯೂರಂ, ಶಿರ್ಕಾರು ಮತ್ತು ನನ್ನಿಲಂ ತಾಲೂಕು ಗಳಿಗೂ ತಂಜಾವೂರು, ಮನ್ನಾರ್‌ಗುಡಿ, ತಿರುತ್ತುರೈಪ್ಪುಂಡಿ ಮತ್ತು ನಾಗಪಟ್ಟಿಣಂ ತಾಲೂಕುಗಳ ಭಾಗಗಳಿಗೂ ಕಾವೇರಿಯ ನೀರಾವರಿ ಸೌಲಭ್ಯ ಕಲ್ಪಿತವಾಗಿದೆ. ತಮಿಳುನಾಡಿನ ಭತ್ತದ ಕಣಜದ ಪ್ರದೇಶವಿದು.

ಕವಲಾಗಿ ಹರಿಯುವಿಕೆ: ಮುಖಜ ಭೂಮಿಯ ಪ್ರದೇಶದಲ್ಲಿ ಕಾವೇರಿ ಎರಡು ಮುಖ್ಯ ಕವಲುಗಳಾಗಿ ಒಡೆಯುತ್ತದೆ. ಉತ್ತರದ್ದು ಕೊಲ್ಲಡಂ, ದಕ್ಷಿಣದ ಕವಲು ಕಾವೇರಿಯೆಂದೇ ಕರೆಸಿಕೊಳ್ಳುತ್ತದೆ. ತಂಜಾವೂರಿನ ಮುಖಜ ಭೂಮಿ ಪ್ರದೇಶದಲ್ಲಿ ನೀರಾವರಿಗೆ ಬಳಸಿಕೊಂಡು ಉಳಿದ ನೀರನ್ನು ಉತ್ತರದ ಶಾಖೆಯಾದ ಕೊಲ್ಲಡಂಗೆ ಬಿಡಲಾಗುತ್ತದೆ. ಈಶಾನ್ಯಾಭಿಮುಖವಾಗಿ ಹರಿಯುವ ಈ ಕವಲು ಪೋರ್ಟೊನೋವೋ ಬಳಿ ಕಡಲು ಸೇರುತ್ತದೆ. ಕಾವೇರಿಯ ಎರಡು ಶಾಖೆಗಳು ಸಮುದ್ರದಲ್ಲಿ ಸಂಗಮವಾಗುವ ಮುನ್ನ ಹಲವಾರು ಕವಲುಗಳಾಗಿ ಒಡೆದು ನೀರಾವರಿಯ ಬಲೆಯನ್ನೇ ಹೆಣೆದಿವೆ. ಇದರ ನೀರಿನ ಬಹುಭಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಬೇರಾವ ನದಿಯನ್ನೂ ಇಷ್ಟೊಂದು ಸಮರ್ಪಕವಾಗಿ ನೀರಾವರಿಗೆ ಉಪಯೋಗಿಸಿಕೊಂಡಿಲ್ಲವೆAದು ಹೇಳಲಾಗಿದೆ.

ಕೊಡಗಿನ ಪ್ರದೇಶದಲ್ಲಿ ಸಣ್ಣ ತೊರೆಯಾಗಿ ಉಗಮಹೊಂದಿ, ತಾರುಣ್ಯದ ಆರಂಭದಿAದಲೇ ಸುತ್ತಣ ಸೀಮೆಯ ಸಂಪತ್ತಿಗೆ ಕಾರಣವಾಗಿ, ಶಿವಸಮುದ್ರದಲ್ಲಿ ಪರಿಧಿಯನ್ನು ಲಂಘಿಸುವಾಗ ವಿದ್ಯುತ್ತನ್ನು ಚಿಮ್ಮಿಸಿ, ತಮಿಳುನಾಡಿನಲ್ಲಿ ತುಂಬು ಚೆಲುವು ತಳೆದು ಸಮುದ್ರವನ್ನು ಸಂಗಮಿಸುವ ಕಾವೇರಿಯ ಉಪಯುಕ್ತತೆಯಿಂದಾಗಿ ಅದನ್ನು ಜನರು ಪವಿತ್ರ ನದಿಯೆಂದು ಪೂಜಿಸುತ್ತಾರೆ.

ಪುರಾಣಗಳಲ್ಲಿ ಕಾವೇರಿ: ಕಾವೇರಿ ನದಿಯ ಉಗಮದ ಕತೆ ಅಗ್ನಿ ಪುರಾಣದಲ್ಲಿ ಬಂದಿದೆ. ಪೂರ್ವಕಾಲದಲ್ಲಿ ಕವೇರನೆಂಬ ಒಬ್ಬ ರಾಜ ಇದ್ದ. ಆತ ಬ್ರಹ್ಮನನ್ನು ಕುರಿತು ಕಠಿಣ ತಪಸ್ಸನ್ನಾಚರಿಸಿದ. ಬ್ರಹ್ಮ ಅವನಿಗೆ ಪ್ರತ್ಯಕ್ಷನಾಗಿ, ಅವನಿಗೆ ಮೋಕ್ಷವುಂಟಾಗಬೇಕಾದರೆ ಇನ್ನು ಸ್ವಲ್ಪ ಕಾಲ ಕಾಯಬೇಕೆಂದೂ ಅಷ್ಟರವರೆಗೆ ಆತ ಬ್ರಹ್ಮನ ಮಗಳಾದ ವಿಷ್ಣುಮಾಯೆ ಯನ್ನು ತನ್ನ ಮಗಳಾಗಿಟ್ಟುಕೊಂಡು ಸಲಹಬೇಕೆಂದೂ ಹೇಳಿದ. ಬ್ರಹ್ಮನ ಇಚ್ಚೆಯಂತೆ ಕವೇರ ರಾಜ ವಿಷ್ಣುಮಾಯೆಯನ್ನು ತನ್ನ ಅರಮನೆಯಲ್ಲಿ ಸಾಕಿದ. ವಿಷ್ಣುವಿನ ಅಂಶದವಳಾದ ವಿಷ್ಣುಮಾಯೆ ಬೆಳೆೆದು ದೊಡ್ಡವಳಾದ ಮೇಲೆ ತಪಸ್ಸು ಮಾಡಲು ಹಿಮಾಲಯ ಪರ್ವತಕ್ಕೆ ಹೋದಳು. ಆಗ ಕವೇರ ರಾಜನಿಗೆ ಮೋಕ್ಷ ಲಭ್ಯವಾಯಿತು. ವಿಷ್ಣುಮಾಯೆಯ ತಪಸ್ಸಿಗೆ ವಿಷ್ಣು ಸಂಪ್ರೀತನಾಗಿ ಅವಳಿಗೆ ಪ್ರತ್ಯಕ್ಷನಾದ. ಅವಳಿಂದ ಜನಕ್ಕೆ ಉಪಯೋಗವಾಗಬೇಕೆಂಬ ಉದ್ದೇಶದಿಂದ ಅವಳು ಎರಡು ರೂಪಗಳನ್ನು ತಳೆಯುವಂತೆ ಒಂದು ರೂಪದಲ್ಲಿ ಅವಳು ಸಹ್ಯ ಪರ್ವತದಲ್ಲಿ ನದಿಯಾಗಿ ಹುಟ್ಟಿ ಹರಿಯುವಂತೆ ಮತ್ತು ಇನ್ನೊಂದು ರೂಪದಲ್ಲಿ ಲೋಪಾಮುದ್ರೆ ಯೆಂಬ ಹೆಸರು ತಳೆದು ಅಗಸ್ತö್ಯ ಋಷಿಯ ಪತ್ನಿಯಾಗುವಂತೆ ವಿಷ್ಣು ಅವಳಿಗೆ ವರ ನೀಡಿದ. ವಿಷ್ಣುಮಾಯೆಗೆ ವಿಷ್ಣು ವರ ನೀಡಿದ ಸಮಯದಲ್ಲಿ ಅಗಸ್ತö್ಯ ಋಷಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಿದ್ದ. ಬ್ರಹ್ಮ ಅಗಸ್ತö್ಯನಿಗೆ ಪ್ರತ್ಯಕ್ಷನಾಗಿ, ಲೋಪಾಮುದ್ರೆಯನ್ನು ವಿವಾಹವಾಗುವಂತೆ ಹೇಳಿದ. ಬ್ರಹ್ಮನ ಆಣತಿಯಂತೆ ಅಗಸ್ತö್ಯ ಲೋಪಾಮುದ್ರೆಯ ರೂಪ ತಳೆದಿದ್ದ ವಿಷ್ಣು ಮಾಯೆಯಿದ್ದಲ್ಲಿಗೆ ಬಂದು ಆಕೆಯನ್ನು ವಿವಾಹವಾದ.

ಅಗಸ್ತö್ಯ ಲೋಪಾಮುದ್ರೆಯನ್ನು ವಿವಾಹವಾದ ಸ್ವಲ್ಪ ಸಮಯದ ಅನಂತರ ಅವನಿಗೆ ದಕ್ಷಿಣ ಭಾರತದಲ್ಲಿ ನೀರಿನ ಕೊರತೆಯಿದೆಯೆಂದು ತಿಳಿಯಿತು. ಲೋಪಾಮುದ್ರೆ ನೀರಿನ ರೂಪ ತಾಳಿ ತನ್ನ ಕಮಂಡಲದಲ್ಲಿರು ವಂತೆ ಅಗಸ್ತö್ಯ ಕೇಳಿಕೊಂಡ. ಲೋಪಾಮುದ್ರೆ ಹಾಗೆಯೇ ಮಾಡಿದಳು. ಅಗಸ್ತö್ಯ ಕಮಂಡಲವನ್ನು ಹಿಡಿದುಕೊಂಡು ಸಹ್ಯ ಪರ್ವತಶ್ರೇಣಿಯ ಬ್ರಹ್ಮಗಿರಿಗೆ ಬಂದ.

ಬ್ರಹ್ಮ ಆ ಗಿರಿಯಲ್ಲಿ ವಿಷ್ನುವನ್ನು ಕುರಿತು ತಪಸ್ಸು ಮಾಡುತ್ತಿದ್ದುದರಿಂದ ಅದಕ್ಕೆ ಬ್ರಹ್ಮಗಿರಿಯೆಂದು ಹೆಸರು ಬಂದಿದೆ. ಈ ಸ್ಥಳದಲ್ಲಿ ವಿಷ್ಣು ಆಮಲಕ ಅಥವಾ ನೆಲ್ಲಿ ಮರದ ರೂಪ ತಳೆದಿದ್ದ. ಆಮಲಕ ಮರದ ರೂಪದಲ್ಲಿದ್ದ ವಿಷ್ಣುವನ್ನು ಪೂಜಿಸಲು ಕೈಲಾಸದಲ್ಲಿ ಹರಿಯುತ್ತಿದ್ದ ವಿರಜಾನದಿಯ ನೀರನ್ನು ಬ್ರಹ್ಮ ತನ್ನ ಶಂಖದಲ್ಲಿ ತಂದು ಅದನ್ನು ಆ ಮರಕ್ಕೆ ಎರೆಯುತ್ತಿದ್ದಾಗ ಅಗಸ್ತö್ಯ ಋಷಿ ಅಲ್ಲಿಗೆ ಬಂದು ತನ್ನ ಕಮಂಡಲವನ್ನು ಒಂದು ದೊಡ್ಡ ಚಪ್ಪಟೆ ಕಲ್ಲಿನ ಮೇಲಿಟ್ಟು ಸ್ನಾನಕ್ಕಾಗಿ ಸ್ವಲ್ಪ ದೂರ ಹೋದ. ಅದೇ ಸಮಯದಲ್ಲಿ ಬಿರುಗಾಳಿ ಬೀಸಿತು. ಕಲ್ಲಿನ ಮೇಲೆ ಇಟ್ಟಿದ್ದ ಕಮಂಡಲ ಮಗುಚಿಕೊಂಡಿತು. ಅದರಲ್ಲಿದ್ದ ನೀರು ಹರಿದು ವಿರಜಾನದಿಯ ನೀರನ್ನು ಸೇರಿಕೊಂಡು ಕಾವೇರಿ ತೀರ್ಥ ಕುಂಡಿಕೆಯಿAದ ನದಿಯಾಗಿ ಹರಿಯಿತು. ನದಿಯಾಗಿ ಹರಿದ ಲೋಪಾಮುದ್ರೆ ವಿಷ್ಣು ಮಾಯೆಯಾಗಿದ್ದಾಗ ಕವೇರ ಅವಳನ್ನು ಸಾಕಿದ್ದರಿಂದ ಈ ನದಿಗೆ ಕಾವೇರಿಯೆಂಬ ಹೆಸರು ಬಂತು.

ಸ್ಕಾAದಪುರಾಣದಲ್ಲಿ ಕಾವೇರಿ ನದಿಯ ಹುಟ್ಟಿನ ಬಗ್ಗೆ ಎರಡು ಕಥೆಗಳುಂಟು.

ಮೊದಲನೆಯ ಕಥೆ ಹೀಗಿದೆ: ಭಾರತದ ಮಧ್ಯದಲ್ಲಿರುವ ವಿಂಧ್ಯ ಪರ್ವತÀ ಒಮ್ಮೆ ಸೂರ್ಯನ ಎತ್ತರಕ್ಕೇರಬೇಕೆಂದು ಬಯಸಿ ಬೆಳೆಯುತ್ತ ಸಾಗಿದ; ಸೂರ್ಯನ ಮತ್ತು ನಕ್ಷತ್ರಗಳ ದಾರಿಗೆ ಅಡ್ಡ ಬಂದ ಅವುಗಳಿಂದ ಬರುವ ಬೆಳಕಿಗೂ ಅಡಚಣೆಯುಂಟಾಯಿತು. ಈ ಬೆಳವಣಿಗೆಯನ್ನು ತಡೆ ಹಿಡಿದು ಅವನನ್ನು ತಗ್ಗಿಸಲು ದೇವತೆಗಳು ಅಗಸ್ತö್ಯನ ಸಹಾಯವನ್ನು ಕೋರಿದರು. ಅಗಸ್ತö್ಯ ಒಪ್ಪಿ ಅದಕ್ಕೆ ಅವಶ್ಯವಿದ್ದ ಆಧ್ಯಾತ್ಮಿಕ ಶಕ್ತಿಯನ್ನು ತನಗೆ ಕೊಡುವಂತೆ ಈಶ್ವರನನ್ನು ಕುರಿತು ತಪಸ್ಸು ಮಾಡಿದ. ಈಶ್ವರನ ಅನುಗ್ರಹ ಲಭ್ಯವಾಯಿತು. ಇಷ್ಟ ಬಂದಲ್ಲಿ ದೇವತಾರ್ಚನೆ ಮಾಡಲು ಅವನೊಡನೆ ನೀರು ಯಾವಾಗಲೂ ಇರುವಂತೆ ವರ ನೀಡಿ ಅವನ ಕಮಂಡಲದಲ್ಲಿರುವAತೆ ಕೈಲಾಸ ಪರ್ವತದಲ್ಲಿ ಹರಿಯುತ್ತಿದ್ದ ಕಾವೇರಿಗೆ ಆಜ್ಞಾಪಿಸಿದ. ಆಗ ಕಾವೇರಿ ನದಿ ಅಗಸ್ತö್ಯನ ಕಮಂಡಲವನ್ನು ಸೇರಿದಳು. ಅಗಸ್ತö್ಯ ಅದನ್ನು ಹಿಡಿದುಕೊಂಡು ಹಿಮಾಲಯ ಪ್ರದೇಶದಿಂದ ಭಾರತಕ್ಕೆ ಹೊರಟು ವಿಂಧ್ಯನ ಹತ್ತಿರ ಬಂದಾಗ ಆ ಪರ್ವತ ಅಗಸ್ತö್ಯನಿಗೆ ಭಕ್ತಿಯಿಂದ ಪೊಡಮಟ್ಟಿತು. ತಾನು ದಕ್ಷಿಣ ಭಾರತಕ್ಕೆ ಶಾಂತ ಮನಸ್ಸಿನಿಂದ ಹೋಗಬೇಕಾಗಿರುವುದ ರಿಂದ ತಾನು ಹಿಂದಕ್ಕೆ ಬರುವವರೆಗೆ ವಿಂಧ್ಯ ಮೇಲಕ್ಕೇಳದೆ ನಮಸ್ಕಾರದ ಭಂಗಿಯಲ್ಲೇ ಇರಬೇಕೆಂದು ಅಗಸ್ತö್ಯ ಹೇಳಿ ದಕ್ಷಿಣ ಭಾರತಕ್ಕೆ ಹೋದ. ಅನಂತರ ಆತ ಉತ್ತರ ಭಾರತಕ್ಕೆ ಹಿಂದಿರುಗಲೇ ಇಲ್ಲ. ಈ ಕಾರಣದಿಂದ ವಿಂಧ್ಯ ಪರ್ವತ ಮಲಗಿದ ಸ್ಥಿತಿಯಲ್ಲೇ ಇದೆಯೆಂದು ಪುರಾಣದಲ್ಲಿ ಹೇಳಿದೆ. ಅಗಸ್ತö್ಯ ದಕ್ಷಿಣ ಭಾರತದಲ್ಲಿ ಸಹ್ಯ ಪರ್ವತದ ಬ್ರಹ್ಮಗಿರಿಗೆ ಬಂದು ಅಲ್ಲಿ ತಪಸ್ಸು ಮಾಡುತ್ತಿದ್ದ. ಆ ಸಮಯದಲ್ಲಿ ಶೂರ ಪದ್ಮನೆಂಬ ಒಬ್ಬ ಅಸುರ ತನ್ನ ತಪಶ್ಯಕ್ತಿಯಿಂದ ಅಲ್ಲಿ ಮಳೆ ಬೀಳುವುದನ್ನು ತಡೆ ಹಿಡಿದಿದ್ದ. ಇದರಿಂದ ಇಂದ್ರನಿಗೆ ಸಂಕಟವಾಯಿತು. ದಕ್ಷಿಣ ದೇಶದಲ್ಲಿ ಯಥೇಚ್ಛವಾಗಿ ನೀರಿರುವಂತೆ ಮಾಡಬೇಕೆಂದು ಗಣಪತಿಯನ್ನು ಪ್ರಾರ್ಥಸಿ ಕೊಂಡ. ಗಣಪತಿ ಕಾಗೆಯ ರೂಪವನ್ನು ತಾಳಿ ಬಂದು ಅಗಸ್ತö್ಯ ತನ್ನ ಪಕ್ಕದಲ್ಲಿ ಕಲ್ಲಿನ ಮೇಲೆ ಇಟ್ಟಿದ್ದ ಕಮಂಡಲವನ್ನು ಮಗುಚಿ ಹಾಕಿದ. ಅದರಲ್ಲಿದ್ದ ಕಾವೇರಿ ಕೂಡಲೇ ನದಿ ರೂಪದಲ್ಲಿ ಅಲ್ಲಿಂದ ಹರಿಯ ತೊಡಗಿದಳು.

ಸ್ಕಾಂದ ಪುರಾಣದಲ್ಲಿರುವ ಎರಡನೆಯ ಕಥೆ ಹೀಗಿದೆ: ಮಕ್ಕಳಿಲ್ಲದ ತನಗೆ ಮಕ್ಕಳಾಗಬೇಕೆಂದು ಕವೇರ ಮುನಿ ಬ್ರಹ್ಮಗಿರಿಯಲ್ಲಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ. ಆಗ ಬ್ರಹ್ಮ ಅವನ ತಪಸ್ಸಿಗೆ ಮೆಚ್ಚಿ ಅವನಿಗೆ ಪ್ರತ್ಯಕ್ಷನಾಗಿ ತನ್ನ ಸಾಕು ಮಗಳಾದ ಲೋಪಾಮುದ್ರೆಯನ್ನು ಅವನಿಗೆ ಕೊಟ್ಟ. ಅಂದಿನಿAದ ಲೋಪಾಮುದ್ರೆ ಕವೇರನ ಮಗಳಾಗಿ ಕಾವೇರಿಯೆಂಬ ಹೆಸರು ಪಡೆದಳು. ಕಾವೇರಿ ತನ್ನ ಸಾಕು ತಂದೆಗೆ ಮೋಕ್ಷವುಂಟಾಗ ಬೇಕೆಂದು ಇಚ್ಛಿಸಿ ತಾನು ನದಿಯಾಗಿ ಹರಿಯುವಂತೆ ಮತ್ತು ಆಗ ತನ್ನಲ್ಲಿ ಸ್ನಾನ ಮಾಡಿದವರು ತಮ್ಮ ಎಲ್ಲ ಪಾಪಗಳಿಂದ ಮುಕ್ತರಾಗುವಂತೆ ವರವನ್ನು ಕೊಡಬೇಕೆಂದು ಬ್ರಹ್ಮಗಿರಿಯಲ್ಲಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದಳು. ಬ್ರಹ್ಮ ಅವಳ ತಪಸ್ಸಿಗೆ ಮೆಚ್ಚಿ ಅವಳು ಕೇಳಿದ ವರವನ್ನು ನೀಡಿದ. (ಮುಂದುವರಿಯುವುದು)

(ಸಂಗ್ರಹ) ಜಿ. ಚಿದ್ವಿಲಾಸ್

ಮಡಿಕೇರಿ.