ಆನೆಗಳಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ!
ಬೆಂಗಳೂರು, ಆ. ೧೪: ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಈ ಬಾರಿಯೂ ನಾಡ ಹಬ್ಬ-ಮೈಸೂರು ದಸರಾವನ್ನು ಸರಳವಾಗಿ ಆಚರಣೆ ಮಾಡುವ ಸಾಧ್ಯತೆ ಇದ್ದು, ಜಂಬೂ ಸವಾರಿ ಯಲ್ಲಿ ಭಾಗವಹಿಸಲು ಯಾವ ಆನೆಗಳಿಗೆ ಅನುಮತಿ ನೀಡಲಾಗು ತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ ಈ ಬಾರಿ ಕೇವಲ ಮಾವುತರು, ಕಾವಡಿಗಳು, ದಸರಾ ಸಂಘಟನಾ ಸಮಿತಿ ಸದಸ್ಯರು ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಮಾತ್ರವಲ್ಲದೆ ಆನೆಗಳಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಕಳೆದ ವರ್ಷ, ಆನೆಗಳನ್ನು ಗಜಪಯಣದ ನಂತರ ಮೈಸೂರಿಗೆ ಕರೆತಂದಾಗ ಕೋವಿಡ್ ಪರೀಕ್ಷಿಸಲಾಯಿತು ಮತ್ತು ೧೩-೧೪ ಆನೆಗಳ ಬದಲಾಗಿ ಕೇವಲ ಐದು ಆನೆಗಳನ್ನು ಮಾತ್ರ ಕರೆ ತರಲಾಗಿತ್ತು. ಈ ವರ್ಷವೂ ಆನೆಗಳನ್ನು ಅರಣ್ಯ ಇಲಾಖೆ, ಪಶುವೈದ್ಯರು ಮತ್ತು ಮೈಸೂರು ಜಿಲ್ಲಾಡಳಿತದ ಅಧಿಕಾರಿಗಳು ಆನೆ ಶಿಬಿರಗಳಿಗೆ ಹೋಗಿ ಕೋವಿಡ್ ಪರೀಕ್ಷೆ ಮಾಡಲು ನಿರ್ಧರಿಸಿದ್ದಾರೆ. ‘ಪಶುವೈದ್ಯರ ನೇತೃತ್ವದ ತಂಡವು ಮೈಸೂರು ಮತ್ತು ಕೊಡಗು ಆನೆ ಶಿಬಿರಗಳಿಗೆ ತೆರಳಿ ಆನೆಗಳ ಆರೋಗ್ಯವನ್ನು ಪರಿಶೀಲಿಸುತ್ತದೆ. ಒಮ್ಮೆ ಅವುಗಳ ವೈದ್ಯಕೀಯ ವರದಿ ಸಾಮಾನ್ಯವಾಗಿದ್ದರೆ ಮತ್ತು ಅವುಗಳ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದ ನಂತರ ದಸರಾ ಆಚರಣೆಯಲ್ಲಿ ಭಾಗವಹಿಸುವ ಆನೆಗಳ ಅಂತಿಮ ಪಟ್ಟಿಯನ್ನು ತಯಾರಿಸಲಾಗುತ್ತದೆ ಎಂದು ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.