ಸೋಮವಾರಪೇಟೆ, ಆ. ೧೩: ೧೫ನೇ ಹಣಕಾಸು ಯೋಜನೆಯ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು. ನಂಜನಗೂಡಿನ ಕಳಲೆ ಗ್ರಾ.ಪಂ.ನಲ್ಲಿ ನಡೆದ ಸಿಬ್ಬಂದಿಯ ಹತ್ಯೆಯ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ವತಿಯಿಂದ ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಕಳೆದ ೧೦ ತಿಂಗಳಿನಿAದ ವೇತನ ನೀಡದೇ ಇರುವುದನ್ನು ಪ್ರಶ್ನಿಸಿದ ಸಂದರ್ಭ ಕಳಗೆ ಗ್ರಾ.ಪಂ.ನಲ್ಲಿ ಸಿಬ್ಬಂದಿಯ ಮೇಲೆ ಪಿಡಿಓ ಹಲ್ಲೆ ನಡೆಸಿದ್ದು, ಇದರಿಂದ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರ ವಿರುದ್ಧ ಕಠಿಣ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ಸಿಬ್ಬಂದಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ೧೫ನೇ ಹಣಕಾಸು ಯೋಜನೆಯಡಿ ಗ್ರಾ.ಪಂ. ಸಿಬ್ಬಂದಿಗಳಿಗೆ ವೇತನ ಪಾವತಿಸುವ ಆದೇಶವಿದ್ದರೂ ಬಹುತೇಕ ಪಿಡಿಓಗಳು ವೇತನ ನೀಡುತ್ತಿಲ್ಲ. ಇದರೊಂದಿಗೆ ಜಲಜೀವನ್ ಮಿಷನ್‌ಗೆ ಹಣ ತುಂಬಬೇಕೆAದು ಸಬೂಬು ಹೇಳುತ್ತಿದ್ದಾರೆ. ಕೆಲವು ಪಂಚಾಯಿತಿಗಳಲ್ಲಿ ಅಧ್ಯಕ್ಷರೂ ಸಹ ಸಹಿ ಹಾಕುತ್ತಿಲ್ಲ. ಇದರಿಂದಾಗಿ ನೌಕರರು ಸಮಸ್ಯೆ ಎದುರಿಸುವಂತಾಗಿದೆ ಎಂದು ಆರೋಪಿಸಿದರು.

ಸರಿಯಾಗಿ ಸಂಬಳ ಲಭಿಸದ ಹಿನ್ನೆಲೆ ಗ್ರಾ.ಪಂ. ನೌಕರರು ತಮ್ಮ ಕುಟುಂಬ ನಿರ್ವಹಣೆಗೆ ಹೆಣಗಾಡುವಂತಾಗಿದೆ. ವೇತನದ ವಿಷಯಕ್ಕಾಗಿ ಚಿಂತಾಮಣಿ, ಬಾದಾಮಿಯಲ್ಲಿ ಗ್ರಾ.ಪಂ. ಕಚೇರಿಯೊಳಗೆ ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು, ಸಿಬ್ಬಂದಿಗಳಿಗೆ ನ್ಯಾಯಯುತ ವೇತನ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂಬAಧಿತ ಮನವಿಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರ ಮೂಲಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ನವೀನ್, ಸದಸ್ಯರಾದ ಮೂರ್ತಿ, ಬಾಬು, ಕಾಶಿ, ದೊಡ್ಡಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.