ಗೋಣಿಕೊಪ್ಪಲು, ಆ. ೧೩: ಸದಾ ಕಸದ ಸಮಸ್ಯೆ ಎದುರಿಸುತ್ತಿದ್ದ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಇದೀಗ ಕಸ ನಿರ್ವಹಣೆಗೆ ವಿನೂತನ ಪ್ರಯತ್ನ ಮಾಡಿದೆ. ನಗರದ ಪ್ರತಿ ಮನೆಗಳಿಗೆ ಎರಡು ಬಕೆಟ್‌ಗಳನ್ನು ಪಂಚಾಯಿತಿ ವತಿಯಿಂದ ನೀಡುವ ಮೂಲಕ ಹಸಿಕಸ ಹಾಗೂ ಒಣಕಸವನ್ನು ವಿಂಗಡಿಸಿ ನೀಡುವಂತೆ ನಾಗರಿಕರಿಗೆ ಮನವಿ ಮಾಡಿದೆ.
ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ., ಉಪಾಧ್ಯಕ್ಷೆ ವೈ.ಎಂ. ಸವಿತ ಹಾಗೂ ಪಂಚಾಯಿತಿ ಸದಸ್ಯರು, ಒಟ್ಟಾಗಿ ಸೇರಿ ಕಸ ನಿರ್ಮೂಲನೆಗೆ ಪಣತೊಟ್ಟಿದ್ದಾರೆ.
ನಗರದ ಒಂದನೇ ವಿಭಾಗದಿಂದ ಕಾರ್ಯಕ್ರಮ ಆರಂಭಿಸಿದ ಪಂಚಾಯಿತಿ ಆಡಳಿತ ಮಂಡಳಿ ಪ್ರತಿ ಮನೆಗಳಿಗೆ ತೆರಳಿ ಮನೆಯವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿತು.
ಕಸ ನಿರ್ವಹಣೆಗೆ ಸಂಜೀವಿನಿ ಸ್ವ ಸಹಾಯ ಮಹಿಳಾ ಸಂಘ ಮುಂದೆ ಬಂದಿದ್ದು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ೧.೭೫ ಲಕ್ಷ ಹಣವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಎರಡು ಸಾವಿರ ಬಕೆಟ್ ಖರೀದಿಸಿ ಪ್ರತಿ ಮನೆಗಳಿಗೆ ತಲಾ ಎರಡು ಬಕೆಟ್ ವಿತರಣೆ ಮಾಡಲಾಗುತ್ತದೆ.
ಪ್ರತಿದಿನ ಪಂಚಾಯಿತಿ ವಾಹನ ಮನೆಗಳಿಗೆ ತೆರಳಿ ಬೇರ್ಪಡಿಸಿದ ಒಣ ಹಾಗೂ ಹಸಿ ಕಸವನ್ನು ಸಂಗ್ರಹಿಸಲಾಗುತ್ತದೆ ಎಂದು ಪಿಡಿಒ ಕೆ.ಎಂ. ತಿಮ್ಮಯ್ಯ ಮಾಹಿತಿ ನೀಡಿದರು.
ನಗರವನ್ನು ಕಸ ಮುಕ್ತವಾಗಿ ಮಾಡಲು ಜನತೆ ಪಂಚಾಯಿತಿ ಯೊಂದಿಗೆ ಸಹಕರಿಸುವಂತೆ ನೂತನ ಗ್ರಾ.ಪಂ. ಅಧ್ಯಕ್ಷೆ ಚೈತ್ರ ಮನವಿ ಮಾಡಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಕಸದ ಸಮಸ್ಯೆಯ ಬಗ್ಗೆ ವ್ಯಾಪಕವಾಗಿ ಚರ್ಚೆ ಕೇಳಿ ಬರುತ್ತಿದೆ. ನಗರದ ಮುಖ್ಯ ರಸ್ತೆಯಲ್ಲಿ ಕಸ ಚೆಲ್ಲಿ ಹೋಗುವ ವರಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕುವ ಸಲುವಾಗಿ ಪಂಚಾಯಿತಿ ಆಡಳಿತ ಮಂಡಳಿ ಹಂತ, ಹಂತವಾಗಿ ಕೆಲಸ ಮಾಡಲಿದೆ ಎಂದು ಉಪಾಧ್ಯಕ್ಷೆ ವೈ.ಎಂ. ಸವಿತಾ ತಿಳಿಸಿದರು.
ಹಿರಿಯ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ಪ್ರತಿ ಮನೆಯವರಿಗೆ ಕಸ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಲು ಕರಪತ್ರ ಮುದ್ರಿಸಿ ಹಂಚಲಾಗುತ್ತಿದೆ ಇದರಿಂದಾಗಿ ಕಸದ ನಿರ್ವಹಣೆ ಮುಂದಿನ ದಿನಗಳಲ್ಲಿ ಹತೋಟಿಗೆ ಬರುವ ವಿಶ್ವಾಸ ಇದೆ ಎಂದರು.
ಕಸ ನಿರ್ವಹಣೆ ಸಂಬAಧ ಮಾಹೇಯಾನ ಪ್ರತಿ ಮನೆಯಿಂದ ತಲಾ ರೂಪಾಯಿ ೩೦ ಹಣವನ್ನು ಸ್ವೀಕರಿಸಲಾಗುತ್ತದೆ ಎಂದು ಸಂಜೀವಿನಿ ಸಂಘದ ಅಧ್ಯಕ್ಷೆ ಎಂ. ಮಂಜುಳ ತಿಳಿಸಿದರು.
ಈ ಸಂದರ್ಭ ಸದಸ್ಯರಾದ ರಾಮಕೃಷ್ಣ, ಜಿ.ಕೆ. ಗೀತಾ, ಕೆ. ರಾಜೇಶ್, ಮನ್ನಕ್ಕಮನೆ ಸೌಮ್ಯ ಬಾಲು, ನೂರೇರ ರತಿ ಅಚ್ಚಪ್ಪ, ಹಕ್ಕಿಮ್, ಪುಷ್ಪ, ಕೊಣಿಯಂಡ ಬೋಜಮ್ಮ, ವಿವೇಕ್, ರಾಮದಾಸ್, ಸೇರಿದಂತೆ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು, ನಾಗರಿಕರು ಉಪಸ್ಥಿತರಿದ್ದರು. ಮೊದಲ ಬಾರಿ ಹಮ್ಮಿಕೊಳ್ಳಲಾದ ಉತ್ತಮ ಕಾರ್ಯಕ್ರಮಕ್ಕೆ ಪ್ರಮುಖ ಹಿರಿಯ ಗ್ರಾ.ಪಂ. ಸದಸ್ಯರು ಗೈರಾಗಿದ್ದರು.
- ಹೆಚ್.ಕೆ. ಜಗದೀಶ್