ರಂಜನ್ ಪ್ರತಿಕ್ರಿಯೆ
ಮಡಿಕೇರಿ, ಆ. ೧೩: ತನಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಕಾರ್ಯಕರ್ತರು ಮುಖ್ಯಮಂತ್ರಿ ಬಳಿ ನಿಯೋಗ ತೆರಳಿದ ಸಂದರ್ಭ ಮುಖ್ಯಮಂತ್ರಿ ಸಕಾರಾತ್ಮಕ ಸ್ಪಂದನ ನೀಡಿದ್ದಾರೆ. ಇದರಿಂದ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರೇ ಸ್ವ ಇಚ್ಚೆಯಿಂದ ಬೆಂಗಳೂರಿಗೆ ತೆರಳಿದ್ದಾರೆ. ತನಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಹೋದ ಮೇಲೆ ತನಗೆ ತಿಳಿದು ಬಂತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕರ್ತರಿಗೆ, ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ಮುಂದೆ ಕಾದು ನೋಡಬೇಕಾಗಿದೆ ಎಂದರು.
ಕಾಲೆಳೆಯುವವರನ್ನು ಬೇತಾಳ ಎಂದು ಕರೆದಿದ್ದೇನೆ. ನಿರ್ಧಿಷ್ಟವಾಗಿ ಯಾರಿಗೂ ಹೇಳಿಲ್ಲ. ಕೆಲವರು ಕಾಲೆಳೆಯುತ್ತಿದ್ದಾರೆ. ತಾನು ಕಾಲೆಳೆಯುವ ಕೆಲಸ ಮಾಡಲ್ಲ ಎಂದರು.