ಗೋಣಿಕೊಪ್ಪಲು, ಆ.೧೪: ಆಟವಾಡುತ್ತಿದ್ದ ಮಗುವೊಂದು ಮನೆಯ ಸಮೀಪದ ಭತ್ತದ ಗದ್ದೆ ಬಳಿ ತೆರಳಿದ ವೇಳೆ ಅಲ್ಲಿದ್ದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬಾಳೆಲೆ ಗ್ರಾಮದಲ್ಲಿ ನಡೆದಿದೆ.

ಬಾಳೆಲೆ ಗ್ರಾಮದ ಕೂಲಿ ಕಾರ್ಮಿಕ ಮಹೇಶ್ ಎಂಬವರ ಮಗ ತ್ರಿಷೀನ್ (೪) ಎಂಬಾತನೇ ಮೃತಪಟ್ಟ ಬಾಲಕ. ಶನಿವಾರ ಎಂದಿನAತೆ ಮಹೇಶ್ ಹಾಗೂ ದಂಪತಿ ಮಗ ತ್ರಿಷೀನ್‌ನನ್ನು ಮನೆಯಲ್ಲಿ ಬಿಟ್ಟು ಕೂಲಿ ಕೆಲಸಕ್ಕೆ ತೆರಳಿದ್ದರು.

ಮಧ್ಯಾಹ್ನ ೧೧.೩೦ ರ ಸುಮಾರಿಗೆ ತ್ರಿಷೀನ್‌ನೊಂದಿಗೆ ಆಟವಾಡಲು ಅಕ್ಕಪಕ್ಕದ ಮಕ್ಕಳು ಆಗಮಿಸಿದ್ದಾರೆ. ಆಟವಾಡುವ ಸಮಯದಲ್ಲಿ ಮಕ್ಕಳು ಮನೆಯ ಸಮೀಪದ ಗದ್ದೆ ಬಳಿ ತೆರಳಿದ್ದರು.

ಈ ಸಂದರ್ಭ ತ್ರಿಷೀನ್ ಅಲ್ಲೆ ಇದ್ದ ಕೆರೆಗೆ ಇಳಿದಿದ್ದಾನೆ. ಈ ವೇಳೆ ಗುಂಡಿಯಲ್ಲಿ ನೀರು ತುಂಬಿದ್ದ ಕಾರಣ ಬಾಲಕ ಮೇಲೆಳಲು ಸಾಧ್ಯವಾಗದೆ ಉಸಿರು ಗಟ್ಟಿ ಕೆರೆಯಲ್ಲಿ ಸಾವನ್ನಪ್ಪಿದ್ದಾನೆ.

ತ್ರಿಷೀನ್ ಕೆರೆಯಲ್ಲಿ ಮುಳುಗಿದ ದೃಶ್ಯವನ್ನು ಕಂಡ ಉಳಿದ ಬಾಲಕರು ಗಾಬರಿಗೊಂಡು ಕೂಡಲೇ ಓಡೋಡಿ ಮನೆಯ ಬಳಿ ಬಂದು ಅಲ್ಲಿದ್ದ ಹಿರಿಯರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊನ್ನಂಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ

(ಮೊದಲ ಪುಟದಿಂದ) ವೇಳೆ ಬಾಲಕ ತ್ರಿಷೀನ್ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ನಂತರ ಬಾಲಕನ ಮೃತದೇಹವನ್ನು ಮೇಲೆತ್ತಿ ಸಮೀಪದ ಆಸ್ಪತ್ರೆಗೆ ಸಾಗಿಸಿ, ಪೋಷಕರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊನ್ನಂಪೇಟೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕುಮಾರ್, ಸಿಬ್ಬಂದಿಗಳು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

- ಹೆಚ್.ಕೆ.ಜಗದೀಶ್