ಸೋಮವಾರಪೇಟೆ, ಆ. ೧೪: ಕುಶಾಲನಗರದ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಮೂಲಕ ತಾಲೂಕಿನ ತೊರೆನೂರು ಗ್ರಾ.ಪಂ. ವ್ಯಾಪ್ತಿಯ ಅರಸಿನಕುಪ್ಪೆ ನವಗ್ರಾಮದಲ್ಲಿ ರೂ. ೩.೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರಿಸಲಾಯಿತು.
ಅರಸಿನಕುಪ್ಪೆ ಗ್ರಾಮದಲ್ಲಿರುವ ಶ್ರೀಮಂಜುನಾಥ ಹಾಗೂ ನವನಾಗನಾಥ ಕ್ಷೇತ್ರಕ್ಕೆ ಒಳಪಟ್ಟಂತೆ ಇರುವ ಜಾಗದಲ್ಲಿ ಸುಮಾರು ರೂ. ೬ ಲಕ್ಷ ವೆಚ್ಚದಲ್ಲಿ ಈ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದ್ದು, ಘಟಕದ ಕಟ್ಟಡವನ್ನು ದೇವಾಲಯ ಸಮಿತಿ ವತಿಯಿಂದ ನಿರ್ಮಿಸಿದ್ದರೆ, ನೀರಿನ ಘಟಕವನ್ನು ರೂ. ೩.೫೦ ಲಕ್ಷ ವೆಚ್ಚದಲ್ಲಿ ಕುಶಾಲನಗರದ ಕನ್ನಿಕಾ ವಿಎಸ್‌ಎಸ್‌ಎನ್‌ನಿಂದ ಸ್ಥಾಪಿಸ ಲಾಗಿದೆ.
ಈ ಭಾಗದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಮನಗಂಡು ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀರಾಜೇಶ್ ನಾಥ್ ಅವರು ಕನ್ನಿಕಾ ವಿಎಸ್‌ಎಸ್‌ಎನ್‌ನ ಪ್ರಮುಖರ ಗಮನಕ್ಕೆ ತಂದ ಹಿನ್ನೆಲೆ, ಆಡಳಿತ ಮಂಡಳಿಯ ಸಹಕಾರದಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ.
ಸಹಕಾರ ಸಂಘದ ಲಾಭಾಂಶದ ಒಂದಿಷ್ಟು ಪಾಲನ್ನು ಸಾರ್ವಜನಿಕ ಸೇವಾ ಕಾರ್ಯಗಳಿಗೆ ವಿನಿಯೋಗಿ ಸುತ್ತಿದ್ದು, ಈಗಾಗಲೇ ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಬಳಿಯಲ್ಲಿ ಘಟಕ ಸ್ಥಾಪಿಸಲಾಗಿದೆ. ಇದರಿಂದ ದಿನಂಪ್ರತಿ ಸಾವಿರಾರು ಮಂದಿಗೆ ಅನುಕೂಲ ವಾಗುತ್ತಿದೆ. ಅರಸಿನಕುಪ್ಪೆ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಮನಗಂಡು ರಾಜೇಶ್‌ನಾಥ್ ಅವರು ಮಾಡಿಕೊಂಡ ಮನವಿಗೆ ಸ್ಪಂದಿಸಿ, ಆಡಳಿತ ಮಂಡಳಿಯವರ ಅನುಮತಿಯೊಂದಿಗೆ ಘಟಕ ಸ್ಥಾಪಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಆರ್. ರವಿಕುಮಾರ್ ತಿಳಿಸಿದರು.
ಘಟಕವನ್ನು ದೇವಾಲಯ ಸಮಿತಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ದಿನದ ೨೪ ಗಂಟೆಗಳ ಕಾಲ ಘಟಕದಿಂದ ಶುದ್ಧ ಕುಡಿಯುವ ನೀರು ಲಭಿಸಲಿದೆ. ಶುದ್ಧ ನೀರು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉದ್ಯಾನವನ ನಿರ್ಮಿಸುವ ಯೋಜನೆಯಿದೆ ಎಂದರು.
ದೇವಾಲಯದ ಪ್ರಧಾನ ಗುರುಗಳಾದ ಶ್ರೀರಾಜೇಶ್‌ನಾಥ್‌ಜೀ ಮಾತನಾಡಿ, ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದೆ. ಕ್ಷೇತ್ರದ ಭಕ್ತಾದಿಗಳೊಂದಿಗೆ ಗ್ರಾಮಸ್ಥ ರಿಗೂ ಇದು ಪ್ರಯೋಜನಕಾರಿಯಾಗಿದೆ ಎಂದರು.
ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್‌ಜಲದ ಮಟ್ಟ ಕುಸಿದಿದ್ದು, ಮಳೆ ಇಲ್ಲದಿದ್ದರೆ ಒಮ್ಮೊಮ್ಮೆ ಕುಡಿಯುವ ನೀರಿಗೂ ಸಮಸ್ಯೆ ತಲೆದೋರುತ್ತದೆ. ಬೋರ್‌ವೆಲ್ ತೆಗೆದರೂ ನೀರು ಲಭಿಸುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಉತ್ತಮ ಯೋಜನೆಯಾಗಿದೆ. ಇದರೊಂದಿಗೆ ಬಿಸಿ ನೀರಿನ ವ್ಯವಸ್ಥೆಯನ್ನೂ ಒದಗಿಸಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ನಟರಾಜ್, ನಿರ್ದೇಶಕರುಗಳಾದ ವೈಶಾಕ್, ಬಾಬು, ಸುನಿತ ಚಕ್ರಪಾಣಿ, ಸಂಜಯ್, ಅಶ್ವಿನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಕುಂತಲ, ದೇವಾಲಯ ಸಮಿತಿಯ ಮೋಹನ್, ರಮೇಶ್, ಪ್ರದೀಪ್, ಪ್ರಕಾಶ್, ಅರ್ಜುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.