ನಾಪೋಕ್ಲು, ಆ. ೧೪: ಸರಕಾರದ ಅನುದಾನವನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಕರೆ ನೀಡಿದರು.
ಶಾಲಾ ಸಭಾಂಗಣದಲ್ಲಿ ನೂತನ ಸಮಿತಿ ರಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನುದಾನದ ಅನುಷ್ಠಾನ ಸರಿಯಾಗಿ ಆಗಬೇಕಾದರೆ ವ್ಯವಸ್ಥಾಪನಾ ಸಮಿತಿ ರಚನೆಯಾಗಬೇಕು. ಅದು ಸರಕಾರದ ಮಾರ್ಗಸೂಚಿಯಂತೆ ನಡೆಯಬೇಕು. ಎಲ್ಲರೂ ಕೈಜೋಡಿಸುವದರ ಮೂಲಕ ರಾಜ್ಯದಲ್ಲಿ ಮಾದರಿ ಶಾಲೆ ಎಂಬ ಹೆಸರುಗಳಿಸಲು ಎಲ್ಲರೂ ಶ್ರಮಿಸಬೇಕು ಎಂದರು.
ಕೇಂದ್ರ ಸರಕಾರ ನೂತನ ಶಿಕ್ಷಣ ರೀತಿ ರೂಪಿಸಿದೆ. ಅದನ್ನು ರಾಜ್ಯ ಸರಕಾರ ಅನುಷ್ಠಾನಗೊಳಿಸಿದೆ. ಆದರೆ, ಕೊರೊನಾ ಕಾರಣದಿಂದ ಅದು ಹೆಚ್ಚಿನ ಯಶಸ್ಸು ಕಂಡಿಲ್ಲ. ಮಕ್ಕಳಿಗೆ ಆನ್ಲೈನ್ ಮೂಲಕ ಸಂಪೂರ್ಣ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಶಾಲೆಯಿಂದಲೇ ಶಿಕ್ಷಣ ದೊರೆಯಬೇಕು ಎಂದರು.
ಶಾಲಾ ಕೊಠಡಿಗೆ ೧.೭೦ ಲಕ್ಷ ರೂ. ಮಂಜೂರಾಗಿದೆ. ಕೊರೊನಾ ಕಾರಣದಿಂದ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಅದರೊಂದಿಗೆ ನೂತನ ಶಾಲಾ ಕಟ್ಟಡಕ್ಕೆ ೨ ಕೋಟಿ ರೂ.ಗಳಲ್ಲಿ ನೀಲನಕ್ಷೆ ತಯಾರಿಸಿ ಹಣ ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳದಲ್ಲಿ ಕಾಮಗಾರಿ ಆರಂಭಿಸಲಾಗುವದು ಎಂದರು.
ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ನೂತನ ಆಡಳಿತ ಮಂಡಳಿ ಶಾಲೆಯ ಜಾಗವನ್ನು ಕಾಪಾಡಿಕೊಳ್ಳಲು ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ಡಾ. ಅವನಿಜಾ ಸೋಮಯ್ಯ ¸ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಹಿರಿಯ ಶಿಕ್ಷಕಿ ಚಂದ್ರಕಲಾ ಇದ್ದರು. ಶಿಕ್ಷಕರಾದ ಅಭಿಷೇಕ್ ಬಂಡೆಪ್ಪ ಪ್ರಾರ್ಥನೆ, ಪ್ರಾಂಶುಪಾಲೆ ಡಾ. ಅವನಿಜಾ ಸೋಮಯ್ಯ ಸ್ವಾಗತ, ಶಿಕ್ಷಕಿ ಉಷಾರಾಣಿ ನಿರೂಪಿಸಿ, ಉಪಪ್ರಾಂಶುಪಾಲೆ ಸೌಭಾಗ್ಯ ವಂದಿಸಿದರು.