ಶನಿವಾರಸಂತೆ, ಆ. ೧೪: ವಾರಾಂತ್ಯದ ಕರ್ಫ್ಯೂ ಜಾರಿಯಾಗಿರುವ ಹಿನ್ನೆಲೆ ಶನಿವಾರ ಪಟ್ಟಣದ ಸಂತೆ ಮಾರುಕಟ್ಟೆಯೊಳಗೆ ವಾರದ ಸಂತೆ ನಡೆಯಲಿಲ್ಲ. ಆದರೆ, ಪಕ್ಕದ ಜಿಲ್ಲೆಯ ವ್ಯಾಪಾರಿಗಳು ಬೆಳಿಗ್ಗೆಯೇ ಬಂದು ಮಾರುಕಟ್ಟೆ ಮುಂಭಾಗದ ಬೈಪಾಸ್ ರಸ್ತೆಯ ೨ ಬದಿಗಳಲ್ಲಿ ತರಕಾರಿ, ಹಣ್ಣುಹಂಪಲು, ಹಸಿಮೀನು, ಬಟ್ಟೆ, ಪ್ಲಾಸ್ಟಿಕ್ ಇತ್ಯಾದಿ ಅಂಗಡಿಗಳನ್ನು ತೆರೆದು ವ್ಯಾಪಾರ ಆರಂಭಿಸಿದರು.
ಪಟ್ಟಣ ಸುತ್ತಮುತ್ತಲಿನ ಗ್ರಾಹಕರು ಮಾಸ್ಕ್ ಧರಿಸದೆ, ಅಂತರ ಕಾಪಾಡಿಕೊಳ್ಳದೆ ಬಂದು ಸಾಮಾನು ಖರೀದಿಸತೊಡಗಿದರು. ಸುದ್ದಿ ತಿಳಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಸಿಬ್ಬಂದಿ, ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಪಿಎಸ್‌ಐ ಎಚ್. ಈ. ದೇವರಾಜ್, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಿದರು.
ಪಂಚಾಯಿತಿ ಸಿಬ್ಬಂದಿ ಕೆಲ ಅಂಗಡಿಗಳಲ್ಲಿ ತೂಕದ ತಕ್ಕಡಿ, ಬಟ್ಟುಗಳನ್ನು ಹೊತ್ತೊಯ್ದರು. ಹೆದರಿದ ವ್ಯಾಪಾರಿಗಳು ತಕ್ಷಣ ಅಂಗಡಿಗಳನ್ನು ಮುಚ್ಚಿ ಜಾಗ ಖಾಲಿ ಮಾಡಿದರು. ಪಂಚಾಯಿತಿ ಅಧಿಕಾರಿಗಳು ಮೊದಲೇ ತಿಳಿಸಿದ್ದಿದ್ದರೇ ನಾವು ಬರುತ್ತಲೇ ಇರಲಿಲ್ಲ. ದೂರದಿಂದ ಬಂದ ನಮಗೆ ಬಹಳ ನಷ್ಟವಾಯಿತು ಎಂದು ಹೊರಜಿಲ್ಲೆಯಿಂದ ಬಂದ ಕೆಲ ವ್ಯಾಪಾರಿಗಳು ಅಳಲು ತೋಡಿಕೊಂಡರು.