ಆತಂಕದಲ್ಲಿ ರೈತರು

ಕಣಿವೆ, ಆ. ೧೪: ಈ ಬಾರಿಯೂ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡಿದೆ. ಇದರಿಂದಾಗಿ ಶುಂಠಿ ಬೆಳೆದ ರೈತರು ಆತಂಕದಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾ ನಿಯಂತ್ರಿಸಲು ನಿರಂತರ ಲಾಕ್‌ಡೌನ್ ಜಾರಿ ಮಾಡಿದ ಪರಿಣಾಮ ರಾಷ್ಟಿçÃಯ ಮತ್ತು ಅಂರ‍್ರಾಷ್ಟಿçÃಯ ಮಾರುಕಟ್ಟೆಗಳು ಮುಚ್ಚಿದ್ದರಿಂದಾಗಿ ವಾಣಿಜ್ಯ ಬೆಳೆ ಶುಂಠಿಯ ವಹಿವಾಟು ಸ್ಥಗಿತಗೊಂಡದ್ದರಿAದ ಕುಸಿತಗೊಂಡ ಬೆಲೆ ಇನ್ನೂ ಕೂಡ ಚೇತರಿಕೆ ಕಾಣದಿದ್ದರಿಂದಾಗಿ ಈ ಬಾರಿಯೂ ಬೆಳೆಗಾರರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷವೂ ಶುಂಠಿ ಬೆಲೆ ಕುಸಿತಗೊಂಡು ಅಪಾರ ಪ್ರಮಾಣದ ನಷ್ಟ ಅನುಭವಿಸಿದ ಕೃಷಿಕರು ಮತ್ತೆ ನಷ್ಟ ಅನುಭವಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದೀಗ ೬೦ ಕೆ.ಜಿ.ಯ ಒಂದು ಚೀಲ ಶುಂಠಿ ಫಸಲಿಗೆ ರೂ. ೬೦೦ ಇದ್ದು, ವಿಚಾರ ತಿಳಿದ ಶುಂಠಿ ಬೆಳೆಗಾರರು ತಲ್ಲಣಗೊಂಡಿದ್ದಾರೆ. ಕಳೆದ ೨೦೨೦ ರ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಶುಂಠಿ ಬಿತ್ತನೆ ಮಾಡಿದ ಅನೇಕ ಬೆಳೆಗಾರರು ಉತ್ತಮ ಬೆಲೆಯ ಹುಡುಕಾಟದಲ್ಲಿ ತಾವು ಬೆಳೆದಂತಹ ಫಸಲನ್ನು ಭೂಮಿಯೊಳಗೆ ಇಟ್ಟುಕೊಂಡು ಕಾಯುತ್ತಿದ್ದಾರೆ. ಹಳೆಯ ಶುಂಠಿಗೆ ಇದೀಗ ರೂ. ೧,೨೫೦ ರಿಂದ ರೂ. ೧,೩೦೦ ಇದೆ. ಹೊಸ ಶುಂಠಿಗೆ ಕೇವಲ ರೂ. ೬೦೦ ಇದೆ. ೨೦೧೮ ರಲ್ಲಿ ಇದೇ ಹಳೆಯ ಶುಂಠಿಗೆ ಮಾರುಕಟ್ಟೆಯಲ್ಲಿ ೯ ರಿಂದ ೧೧ ಸಾವಿರ ರೂಗಳವರೆಗೂ ಇತ್ತು. ಹೊಸ ಶುಂಠಿಗೆ ಕನಿಷ್ಟ ರೂ. ೩,೨೦೦ ರಿಂದ ಗರಿಷ್ಠ ರೂ. ೫,೬೦೦ ವರೆಗೂ ಇತ್ತು. ಹಾಗಾಗಿ ಶುಂಠಿಯ ಬೆಳೆಯತ್ತ ಪ್ರತಿಯೊಬ್ಬರು ಮುಖ ಮಾಡಿದ್ದರಿಂದಾಗಿ ಇಂದು ತನಗೆ ಸಾಲ ಕೊಟ್ಟವರೆದುರು ಮುಖ ಮುಚ್ಚಿಕೊಂಡು ತಿರುಗೋ ಸ್ಥಿತಿ ನಿರ್ಮಾಣವಾಗಿದೆ.

ಒಂದು ಎಕರೆ ಭೂಮಿಯಲ್ಲಿ ಶುಂಠಿ ಬೆಳೆಯಲು ಕನಿಷ್ಟ ೩.೫೦ ಲಕ್ಷ ರೂ.ಗಳಿಂದ ೪ ಲಕ್ಷ ಖರ್ಚಾಗುತ್ತದೆ. ಒಂದು ಎಕರೆ ಭೂಮಿಯಲ್ಲಿ ಹುಲುಸಾದ ಶುಂಠಿ ಫಸಲು ಬಂದರೆ ೩೦೦ ಚೀಲ ಶುಂಠಿ ಬರುತ್ತದೆ. ಈಗಿನ ಕನಿಷ್ಟ ದರ ೬೦೦ ರೂ.ಗೆ ಶುಂಠಿ ಕಟಾವು ಮಾಡಿದರೆ ಕೇವಲ ೨ ಲಕ್ಷ ರೂಪಾಯಿ ಮಾತ್ರ ಸಿಗುತ್ತದೆ. ಅಂದರೆ ಖರ್ಚು ಮಾಡಿದ ಹಣದಲ್ಲಿಯೇ ಒಂದೂವರೆಯಿAದ ಎರಡು ಲಕ್ಷ ಹಣ ನಷ್ಟವಾಗುತ್ತಿದೆ. ಹಾಗಾಗಿ ಕಳೆದ ಎರಡು ವರ್ಷಗಳಿಂದಲೂ ನಷ್ಟದ ಮೇಲೆ ನಷ್ಟದ ಹೊಡೆತಕ್ಕೆ ಬೆಳೆಗಾರರು ಸಿಲುಕಿದ್ದಾರೆ. ಇನ್ನೊಂದೆಡೆ ಈ ಬಾರಿ ಬೆಳೆದ ಶುಂಠಿ ಬೆಳೆಗೆ ಮಾರಕವಾದ ಕೊಳೆ ರೋಗ, ಮಹಾಕಾಳಿ ರೋಗಗಳು ಬಾಧಿಸುತ್ತಿದ್ದು, ಈ ರೋಗ ಹತೋಟಿಗೆ ತರಲು ಸಾವಿರಾರು ರೂಪಾಯಿಗಳ ಔಷಧಿ ಖರೀದಿಸಿ ಸಿಂಪಡಿಸಬೇಕಿದೆ. ಹಾಗಾಗಿ ಈಗಿರುವ ಬೆಲೆ ಕುಸಿತದಲ್ಲಿ ಬೆಳೆ ಉಳಿಸಿಕೊಳ್ಳುವ ಧಾವಂತದಲ್ಲಿ ಬೆಳೆಗಾರರು ಉಳಿದಿಲ್ಲ. ಅಷ್ಟರಮಟ್ಟಿಗೆ ಶುಂಠಿ ಕೃಷಿಕರು ಬೇಸತ್ತು ಹೋಗಿದ್ದಾರೆ. ಈ ಕಡೆ ಹೆಚ್ಚಿನ ಮಳೆಯಿಂದಾಗಿ ದಿನೇ ದಿನೇ ಹರಡುತ್ತಿರುವ ಶುಂಠಿಯ ರೋಗವನ್ನು ತಹಬದಿಗೆ ತರಲಾಗುತ್ತಿಲ್ಲ. ಅತ್ತ ಕಟಾವು ಮಾಡೋಣ ಅಂದರೆ ಖರ್ಚು ಮಾಡಿದ ಅರ್ಧ ಪ್ರಮಾಣದ ಹಣವೂ ಸಿಗುತ್ತಿಲ್ಲ.

ಒಟ್ಟಾರೆ ಬೆಲೆ ಕುಸಿತದ ಹೊಡೆತದಲ್ಲಿ ಸಿಲುಕಿ ಒದ್ದಾಡುತ್ತಾ ಸಾಲ ಬಾಧೆಯಿಂದಾಗಿ ಕೃಷವಾಗುತ್ತಿರುವ ಶುಂಠಿ ಕೃಷಿಕರ ಸ್ಥಿತಿ ದೇವರಿಗೆ ಪ್ರೀತಿ.

- ಕೆ.ಎಸ್. ಮೂರ್ತಿ.