ಮಡಿಕೇರಿ, ಆ. ೧೪: ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಾಮಾಜಿಕ ಜಾಲತಾಣದ ಕಾರ್ಯಕಾರಿಣಿ ಸಭೆ ನಡೆಯಿತು, ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಸಾಮಾಜಿಕ ಜಾಲತಾಣದ ನಿರ್ವಹಣೆ ಮತ್ತು ಸಾಮಾಜಿಕ ಕಾರ್ಯಕರ್ತರ ಹೊಸ ಸೇರ್ಪಡೆ ವಿಚಾರದ ಬಗ್ಗೆ ಚರ್ಚಿಸಲಾಯಿತು. ಬ್ಲಾಕ್ ಹಂತದಲ್ಲಿ ಜೊತೆಜೊತೆಯಾಗಿ ವಲಯ ಮತ್ತು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸೇರಿಸಿ ಕಾಂಗ್ರೆಸ್ ಪಕ್ಷದ ಪರವಾಗಿ ಸಾಮಾಜಿಕ ಜಾಲತಾಣದ ಪ್ರಚಾರ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಸಾಮಾಜಿಕ ಜಾಲತಾಣದ ಮೂಲಕ ನಾವು ವೇಗವಾಗಿ ಜನರನ್ನು ತಲುಪಬಹುದು. ಇಂದು ಬಿಜೆಪಿ ಮತ್ತು ಜೆಡಿಎಸ್ ಸುಳ್ಳುಗಳನ್ನು ಸತ್ಯವನ್ನಾಗಿ ಸಮರ್ಥಿಸುವ ಕೆಲಸ ಮಾಡುತ್ತಿದೆ. ನಮ್ಮ ಪಕ್ಷಕ್ಕೆ ೭೦ ವರ್ಷದ ಸಾಧನೆಯ ಇತಿಹಾಸ ಇದೆ. ಸುಳ್ಳುಗಳನ್ನು ಹೇಳುವ ಅವಶ್ಯಕತೆ ಇಲ್ಲ. ನಮ್ಮ ಸಾಧನೆಗಳನ್ನು ಬಿತ್ತರಿಸುವ ಕೆಲಸ ಮಾಡಿ, ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಕೆಪಿಸಿಸಿ ಪ್ಯಾನಲಿಸ್ಟ್ ಟಿ.ಪಿ. ರಮೇಶ್ ಮಾತನಾಡಿ, ಸಾಮಾಜಿಕ ಜಾಲತಾಣದ ಕಾರ್ಯಕರ್ತರ ಸಂವಹನ, ಪದಬಳಕೆ ಮತ್ತು ವಾಸ್ತವತೆಯನ್ನು ಹೇಗೆ ವ್ಯಕ್ತಪಡಿಸಬೇಕೆಂದು ಸಲಹೆ ನೀಡಿದರು. ಕಾಂಗ್ರೆಸ್ ಪಕ್ಷದ ಹಲವಾರು ಯೋಜನೆಗಳು ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ನಾವು ಹಿಂದೆ ಇದ್ದೇವೆ. ಹಾಗಾಗಿ ತಾವುಗಳು ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರು ಸಂವಿಧಾನಿಕವಾಗಿ ವರ್ತಿಸಿ ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷ ಲೋಹಿತ್ ಗೌಡ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್, ಜಿಲ್ಲಾ ಸಮಿತಿ ಸದಸ್ಯರಾದ ಕೊಟ್ಟಮುಡಿ ಶಾಫಿ, ಮೀನಾಜ್, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿಲನ್, ನಾಪೋಕ್ಲು ಬಷೀರ್, ಮಡಿಕೇರಿ ನಗರ ಅಧ್ಯಕ್ಷ ತಾಹ, ಇತರರು ಸಭೆಯಲ್ಲಿ ಭಾಗವಹಿಸಿದ್ದರು