(ವರದಿ: ಎಂ.ಎನ್. ಚಂದ್ರಮೋಹನ್)

ಕುಶಾಲನಗರ, ಆ. ೧೩: ಕೊಡಗು ಜಿಲ್ಲೆಯಲ್ಲಿ ಪ್ರಥಮ ವಿದ್ಯಮಾನವೆಂಬAತೆ ಅಪೂರ್ವ, ಆಶ್ಚರ್ಯಕರ ಆದೇಶವೊಂದು ನಿನ್ನೆ ದಿನ ರಾಜ್ಯ ಅರಣ್ಯ ಇಲಾಖೆಯಿಂದ ಹೊರಬಿದ್ದಿದೆ. ದುಬಾರೆ ಸನಿಹದ ಇಕ್ಕನಹಳ್ಳಿ, ಹನಕೋಡು ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಖಾಸಗಿ ಆನೆಗಳ ಒಡೆತನ ಹೊಂದಿ ತನ್ನದೇ ವನ್ಯ ಪ್ರಾಣಿಗಳ ಸಾಮ್ರಾಜ್ಯ ನಿರ್ಮಿಸಿಕೊಂಡಿದ್ದ ಆನೆಮನೆ ಫೌಂಡೇಶನ್ ಇದೀಗ ರಾಜ್ಯದ ಕಾನೂನಿನ ಚೌಕಟ್ಟಿನಲ್ಲಿ ತನ್ನ ಆಳ್ವಿಕೆಯನ್ನು ಕಳೆದುಕೊಂಡಿದೆ. ಈ ಆನೆಗಳ ಸಾಮ್ರಾಜ್ಞಿ ಎನಿಸಿ ತನ್ನ ನಿಯಂತ್ರಣದಲ್ಲಿರಿಸಿಕೊAಡಿದ್ದ ಪ್ರಜ್ಞಾ ಚೌಟಾ ಅವರಿಗೆ ಆಘಾತವೆನ್ನುವಂತೆ ಈ ಎಲ್ಲಾ ೭ ಆನೆಗಳನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ತೆಗೆದುಕೊಳ್ಳಲು ಅಧಿಕೃತ ಆದೇಶ ಹೊರಡಿಸಿದೆ.

ಪ್ರಜ್ಞಾ ಚೌಟಾ ಅವರ ಅಧೀನದಲ್ಲಿದ್ದ ಹೆಣ್ಣಾನೆಗಳಾದ ಹಿರಣ್ಯ (೪೩), ಮಾಲಾದೇವಿ (೩೪), ಪೂಜಾ (೮), ಕಮಲಿ (೪) ಹಾಗೂ ಕನ್ನಿಕಾ (೨) ಮತ್ತು ಗಂಡಾನೆಗಳಾದ ಗಜ (೭) ಹಾಗೂ ಧರ್ಮ (೧೨)- ದಂತದ ಆನೆ) ಇವಿಷ್ಟು ಆನೆಗಳನ್ನು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯು ವಶಪಡಿಸಿಕೊಳ್ಳಲು ರಾಜ್ಯ ವನ್ಯಜೀವಿ ವಿಭಾಗದ ಚೀಫ್ ವೈಲ್ಡ್ಲೈಫ್ ವಾರ್ಡನ್ ಹಾಗೂ ಪ್ರಿನ್ಸಿಪಾಲ್ ಚೀಫ್ ಕನ್ಸರ್ವೇಟರ್ ಆಫ್ ಫಾರೆಸ್ಟ್ (ವನ್ಯಜೀವಿ) ಅವರು ಲಿಖಿತ ಆದೇಶ ಜಾರಿಗೊಳಿಸಿದ್ದಾರೆ.

ಕಾರಣಗಳು

ಅರಣ್ಯ ಇಲಾಖೆ ಈ ನಿರ್ಧಾರ ಕೈಗೊಳ್ಳಲು ಪಿಸಿಸಿಎಫ್ ಅವರು ನಿಖರ ಕಾರಣಗಳನ್ನು ನೀಡಿದ್ದಾರೆ. ಪ್ರಜ್ಞಾ ಚೌಟಾ ಅವರ ನಿಯಂತ್ರಣದಲ್ಲಿದ್ದ ಈ ಆನೆಗಳು ಅವರ ಅಧೀನದಲ್ಲಿದ್ದ ಸರಹದ್ದಿನಿಂದ ಹೊರಬಂದು ಇತರ ಪ್ರದೇಶಗಳಿಗೆ ನುಗ್ಗುತ್ತಿದ್ದವು. ಸನಿಹದ ಗ್ರಾಮಗಳು, ತೋಟಗಳು ಹಾಗೂ ಮಾನವ ವಾಸದ ಪ್ರದೇಶಗಳು ಮತ್ತು ದುಬಾರೆ, ಮಾಲ್ದಾರೆ, ಮೀನುಕೊಲ್ಲಿ, ಆನೆಕಾಡು, ಅತ್ತೂರು ವಿಭಾಗದ ಆನೆ ಶಿಬಿರ ಪ್ರದೇಶಗಳಿಗೆ ಈ ೭ ಆನೆಗಳು ರಾಜಾರೋಷವಾಗಿ ತೆರಳುತ್ತಿದ್ದವು. ನಾಕೂರು- ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓ, ಸೋಮವಾರಪೇಟೆ ತಾ.ಪಂ. ಸದಸ್ಯರು ಮತ್ತು ಇಓ ಸಲ್ಲಿಸಿದ್ದ ಮನವಿ ಪತ್ರಗಳಲ್ಲಿ ಅರಣ್ಯ ಇಲಾಖೆಯು ಈ ಆನೆಗಳನ್ನು ಸೆರೆಹಿಡಿಯುವಂತೆ ಕೋರಿದ್ದರು. ಈ ವ್ಯಾಪ್ತಿಯ ಗ್ರಾಮಗಳಲ್ಲಿ ಆನೆಗಳು ದಾಂಧಲೆ ನಡೆಸಿ ಬೆಳೆಗಳನ್ನು ಹಾನಿಗೊಳಿಸುತ್ತಿದ್ದವು. ಗ್ರಾಮಸ್ಥರಿಗೆ ಭಯ ಮೂಡಿಸುತ್ತ್ತಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಇದಲ್ಲದೆ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಕೂಡ ಅರಣ್ಯ ಇಲಾಖೆಗೆ ದೂರು ಸಲ್ಲಿಸಿ ನಾಕೂರು- ಶಿರಂಗಾಲ ಗ್ರಾಮಗಳಲ್ಲಿ ಬೆಳೆ ಹಾನಿ ಮತ್ತು ಮಾನವನ ಪ್ರಾಣಕ್ಕೆ ಅಪಾಯವಿರುವ ಬಗ್ಗೆ ವಿವರಿಸಿದ್ದರು.

ಈ ಎಲ್ಲಾ ದೂರುಗಳನ್ನು ಆಧರಿಸಿ ಕುಶಾಲನಗರ ಅರಣ್ಯ ವಲಯಾಧಿಕಾರಿಯವರು ಶ್ರೀಮತಿ ಪ್ರಜ್ಞಾ ಚೌಟಾ ಅವರಿಗೆ ನೋಟೀಸ್ ಜಾರಿಗೊಳಿಸಿ, ತಕ್ಷಣದಿಂದಲೇ ಆನೆಗಳನ್ನು ತಮ್ಮ ಸರಹದ್ದಿನ ನಿಯಂತ್ರಣದಲ್ಲಿರಿಸಿಕೊಳ್ಳಲು ಸೂಚನೆ ನೀಡಿದ್ದರು. ಆದರೆ, ಪ್ರಜ್ಞಾ ಅವರು ಯಾವುದೇ ಸಮರ್ಪಕ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷö್ಯ ಮಾಡಿದ್ದರು. ಅಂತೂ ಅಂತಿಮ ನೋಟೀಸ್ ಎಂಬAತೆ ಕುಶಾಲನಗರ ಅರಣ್ಯಾಧಿಕಾರಿಯವರು

ತಾ. ೫.೬.೨೦೨೧ರಂದು ಪ್ರಜ್ಞಾ ಅವರಿಗೆ

(ಮೊದಲ ಪುಟದಿಂದ) ನೋಟೀಸ್ ಜಾರಿಗೊಳಿಸಿ ಅವರು ಕೈಗೊಂಡ ಕ್ರಮಗಳ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ಸೂಚಿಸಿದ್ದರು. ಇದಕ್ಕೆ ಉತ್ತರಿಸಿದ್ದ ಪ್ರಜ್ಞಾ ಅವರು, ಈ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳನ್ನು ಇತರ ಯಾವುದಾದರೂ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸಲು ತಮ್ಮ ಸಮ್ಮತಿ ನೀಡಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ಪಂಚಾಯಿತಿ ಆಡಳಿತಗಳ ದೂರಿನ ಅನ್ವಯ ಆನೆ - ಮಾನವ ಸಂಘರ್ಷವನ್ನು ತಡೆಗಟ್ಟಲು ಮಡಿಕೇರಿಯ ಕೊಡಗು ವೃತ್ತದ ಕನ್ಸರ್ವೇಟರ್ ಆಫ್ ಫಾರೆಸ್ಟ್ ಅವರು ರಾಜ್ಯ ಅರಣ್ಯ ಇಲಾಖಾಧಿಕಾರಿಗಳಿಗೆ ಶಿಫಾರಸು ಪತ್ರ ಕಳುಹಿಸಿದ್ದರು. ಅದರ ಪ್ರಕಾರ ಪ್ರಜ್ಞಾ ನೇತೃತ್ವದ ಆನೆಮನೆ ಫೌಂಡೇಶನ್‌ನ ಆನೆಗಳ ಮಾಲೀಕತ್ವ ದೃಢೀಕರಣವನ್ನು ರದ್ದುಗೊಳಿಸುವಂತೆ ಕೋರಿದ್ದರು. ಅಂತಿಮವಾಗಿ ವನ್ಯಜೀವಿ ಕಾಯ್ದೆ ೧೯೮೨ರ ಸೆಕ್ಷನ್ ೩೯(೩) ಹಾಗೂ ಸೆಕ್ಷನ್ ೪೦ ಮತ್ತು ೪೨ರನ್ವಯ ಪ್ರಜ್ಞಾ ಚೌಟಾ ಅವರ ಮಾಲೀಕತ್ವದ ಎಲ್ಲಾ ೭ ಆನೆಗಳನ್ನು ಸರಕಾರಕ್ಕೆ ವಶಪಡಿಸಿಕೊಳ್ಳಲು ರಾಜ್ಯ ಅರಣ್ಯ ಇಲಾಖೆ ಆದೇಶ ಜಾರಿಗೊಳಿಸಿದೆ. ಈ ಆನೆಗಳ ಪೈಕಿ ಹಿರಣ್ಯ ಮತ್ತು ಮಾಲಾದೇವಿ ಈ ೨ ಹೆಣ್ಣಾನೆಗಳನ್ನು ನಾಗರಹೊಳೆ ಹುಲಿ ಸಂರಕ್ಷಿತ ಬಲ್ಲೆ ಆನೆಕ್ಯಾಂಪ್ ಹಾಗೂ ಇತರ ೩ ಹೆಣ್ಣಾನೆಗಳಾದ ಪೂಜಾ, ಕಮಲಿ ಮತ್ತು ಕನ್ನಿಕೆ ಮತ್ತು ೨ ಗಂಡಾನೆಗಳಾದ ಗಜ ಹಾಗೂ ಧರ್ಮ ಇವುಗಳನ್ನು ಬಂಡೀಪುರ ಹುಲಿ ಸಂರಕ್ಷಿತ ರಾಮಪುರ ಆನೆಕ್ಯಾಂಪ್‌ಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಆನೆಗಳಿಗೆ ಆನೆಮನೆ ಫೌಂಡೇಶನ್‌ನ ಶ್ರೀಮತಿ ಪ್ರಜ್ಞಾ ಚೌಟಾ ಅವರು ತಮ್ಮ ಖರ್ಚಿನಲ್ಲಿ ರೇಡಿಯೋ ಕಾಲರ್ ಅಳವಡಿಸಬೇಕು ಎಂದು ಆದೇಶದಲ್ಲಿ ನಿರ್ಬಂಧಿಸಲಾಗಿದೆ. ಈ ಆನೆಗಳನ್ನು ಆಯಾ ಆನೆ ಶಿಬಿರಗಳಿಗೆ ಸ್ಥಳಾಂತರಗೊಳಿಸುವ ಸಾಗಾಟ ವೆಚ್ಚ ಮತ್ತು ಮುಂದಿನ ನಿರ್ವಹಣಾ ವೆಚ್ಚಗಳನ್ನು ಆಯಾ ವಿಭಾಗದ ಹುಲಿ ಸಂರಕ್ಷಿತ ಅರಣ್ಯ ಇಲಾಖಾ ಕೇಂದ್ರಗಳು ಭರಿಸುವಂತೆಯೂ ನಿರ್ದೇಶಿಸಲಾಗಿದೆ.