ಮಡಿಕೇರಿ, ಆ. ೧೩: ಕಳೆದ ಹಲವಷ್ಟು ವರ್ಷಗಳಿಂದ ಕೊಡಗು ಜಿಲ್ಲೆ ರಾಜಕೀಯವಾಗಿ ಬಿ.ಜೆ.ಪಿ.ಯ ಭದ್ರಕೋಟೆಯಾಗಿದೆ. ಯಾವುದೇ ಚುನಾವಣೆಗಳು ಬಂದರೂ... ಆರಂಭದಲ್ಲಿ ಏನೇ ಅಡ್ಡಿ - ಆತಂಕಗಳು, ಭಿನ್ನಾಭಿಪ್ರಾಯಗಳು ಕೇಳಿ ಬಂದರೂ ಅಂತಿಮವಾಗಿ ವಿಜಯಪತಾಕೆ ಹಾರಿಸಿಕೊಂಡು ಬರುತ್ತಿರುವುದು ‘ಕಮಲದ ವಿಶೇಷ’. ಗ್ರಾ.ಪಂ.ನಿAದ ಹಿಡಿದು ತಾ.ಪಂ.-ಜಿ.ಪA., ನಗರಸಭೆ-ಪ.ಪಂ.ಗಳು ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ಸಹಕಾರ ಸಂಘ-ಸAಸ್ಥೆಗಳು ಕೂಡ ಕೊಡಗಿನಲ್ಲಿ ಬಿ.ಜೆ.ಪಿ.ಮಯ ಎಂಬದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಸಡ್ಡುಹೊಡೆದು ನಿಲ್ಲಲು ಪ್ರತಿ ಪಕ್ಷಗಳು ಎಷ್ಟೇ ಪ್ರಯತ್ನ ನಡೆಸಿದರೂ ಈ ತನಕ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ.... ಇದೀಗ ಈ ಬಿಜೆಪಿಯ ಭದ್ರಕೋಟೆಯೊಳಗೆ ಒಂದಷ್ಟು ಗೊಂದಲಮಯದ ಸನ್ನಿವೇಶ ಸೃಷ್ಟಿಯಾದಂತಿದೆ. ರಾಜ್ಯಮಟ್ಟದಲ್ಲಿನ ಬೆಳವಣಿಗೆಯ ಪರಿಣಾಮವೋ ಎಂಬAತೆ ಕೋಟೆ ಸ್ವಲ್ಪ ಮಟ್ಟಿಗೆ ಅಲುಗಾಡುತ್ತಿದೆಯೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ರಾಜ್ಯದಲ್ಲಿನ ಆಡಳಿತಾ ರೂಢ ಬಿ.ಜೆ.ಪಿ. ಪಕ್ಷದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಸ್ಥಾನ ಬದಲಾವಣೆ... ಹೊಸದಾಗಿ ನೇಮಕಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಚನೆಯಾದ ನೂತನ ಸಚಿವ ಸಂಪುಟದ ವಿಚಾರ ಕೊಡಗಿನ ಬಿ.ಜೆ.ಪಿ.ಯ ಮೇಲೆ ಪ್ರಭಾವ ಭೀರಿದಂತಿದೆ. ಬಹು ನಿರೀಕ್ಷೆ ಹೊಂದಿದ್ದ ಕೊಡಗಿಗೆ ನೂತನ ಸಚಿವ ಸಂಪುಟದಲ್ಲೂ ಮಂತ್ರಿ ಸ್ಥಾನ ದೊರೆತಿಲ್ಲ. ಇಬ್ಬರು ಹಿರಿಯ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಖಚಿತ ಎಂಬ ನಿರೀಕ್ಷೆ ಇತ್ತು. ಅದರಲ್ಲೂ ಎಲ್ಲಾ ಸಂದರ್ಭದಲ್ಲೂ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಪ್ಪಚ್ಚು ರಂಜನ್ ಸಚಿವರಾಗುವುದು ಬಹುತೇಕ ಖಚಿತ ಎಂಬ ಸನ್ನಿವೇಶವೇ ಈ ಬಾರಿ ಸೃಷ್ಟಿಯಾಗಿತ್ತು. ಆದರೆ ನೂತನ ಸಚಿವರ ಪಟ್ಟಿ ಅಧಿಕೃತಗೊಂಡ ಬೆನ್ನಲ್ಲೇ ಕೊಡಗಿನಲ್ಲಿ ‘ಬಾಂಬ್’ ಸ್ಪೋಟಿಸಿದಂತಾಗಿದೆ. ಅತ್ತ ಅಪ್ಪಚ್ಚು ಇಲ್ಲ ಇತ್ತ ಬೋಪಯ್ಯರೂ ಸಚಿವರಾಗಿಲ್ಲ...
(ಮೊದಲ ಪುಟದಿಂದ) ಇದು ಒತ್ತಟ್ಟಿಗಿರಲಿ ಇದರ ಪರಿಣಾಮದ ಗಾಳಿ ಜಿಲ್ಲೆಯ ಬಿ.ಜೆ.ಪಿ.ಯಲ್ಲಿ ತಳಮಳ ಸೃಷ್ಟಿಸಿದಂತಿದೆ.
ಅದರಲ್ಲೂ ಅಪ್ಪಚ್ಚು ರಂಜನ್ ಭಾರೀ ‘ಗರಂ’ ಆಗಿದ್ದಾರೆ. ಪಟ್ಟಿಯಲ್ಲಿದ್ದ ತಮ್ಮ ಹೆಸರು ಇಲ್ಲದಂತಾಗಲು ಜಿಲ್ಲೆಯವರೇ ಆದ ಪ್ರಮುಖರೊಬ್ಬರು ಕಾರಣ ಎಂಬ ಆಕ್ರೋಶವನ್ನು ಹೊರ ಹಾಕಿರುವ ಅವರು ಬೇತಾಳದ ಕಥೆಯನ್ನು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಸಂಸದರ ಜಾಣಮೌನವೂ ಪ್ರಶ್ನಾರ್ಹ ವೆಂಬAತೆ ರಂಜನ್ ಅಸಮಾಧಾನದ ಚಾಟಿ ಬೀಸಿದ್ದಾರೆ. ಬೇತಾಳ ತಮಗೆ ಅಡ್ಡಿ ಮಾಡಿದೆ ಎಂಬ ಅವರ ಹೇಳಿಕೆ ಸಾಕಷ್ಟು ಪ್ರಶ್ನೆ ಬಿ.ಜೆ.ಪಿ.ಯಲ್ಲಿ ಮಾತ್ರವಲ್ಲ ಪ್ರತಿ ಪಕ್ಷಗಳಲ್ಲೂ ಸಂಚಲನ ಮೂಡಿಸಿದೆ.
ಇದೀಗ ಹಲವಾರು ಮಂದಿ ರಂಜನ್ ಪರವಾಗಿ ಬ್ಯಾಟ್ ಬೀಸುತ್ತಿರುವುದು ಒಂದೆಡೆಯಾದರೆ, ಇನ್ನು ಕೆಲವರು ಕೆ.ಜಿ. ಬೋಪಯ್ಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಈ ಬೆಳವಣಿಗೆ ಕೆಲ ದಿನಗಳಿಂದ ಇನ್ನೂ ಹೆಚ್ಚಾಗುತ್ತಿರುವುದು ಕಂಡುಬAದಿದೆ. ಇದು ಮುಖ್ಯಮಂತ್ರಿಗಳ ಮಟ್ಟಕ್ಕೂ ತಲುಪಿದೆಯಲ್ಲದೆ ಬೆಂಗಳೂರಿಗೆ ರಂಜನ್ ಪರವಾಗಿ ಜಾಥವೊಂದು ಕೂಡ ನಡೆಯಲ್ಪಟ್ಟಿದೆ. ಹಿರಿಯ ಶಾಸಕ ಹಾಗೂ ಕೊಡವ ಜನಾಂಗದ ಆಧಾರದಲ್ಲಿ ಸಚಿವ ಸ್ಥಾನ ನಿರೀಕ್ಷೆ ಹೊಂದಿದ್ದ ರಂಜನ್ ಅವರ ನಿರಾಸೆ ಆಕ್ರೋಶದ ಸ್ವರೂಪ ಕಾಣುತ್ತಿದ್ದರೆ, ಬೋಪಯ್ಯ ಅವರು ಮೌನಕ್ಕೆ ಜಾರಿದ್ದಾರೆ.
ಸಂಸದರೂ ತುಟಿ ಬಿಚ್ಚಿಲ್ಲ. ಎಂಎಲ್‌ಸಿಯಾಗಿರುವ ಸುನಿಲ್ ಸುಬ್ರಮಣಿ ಅವರು ಕೂಡ ಎಲ್ಲೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬೆಳವಣಿಗೆ ಆಯಾ ಶಾಸಕರ ಬೆಂಬಲಿಗರ ಪಾಳಯದಲ್ಲಿ ಗೊಂದಲ ಸೃಷ್ಟಿಸಿರುವುದು ಸುಳ್ಳಲ್ಲ. ಆದರೂ ಕಾರ್ಯಕರ್ತರು ಕೂಡ ಅತ್ತ ದರಿ ಇತ್ತ ಪುಲಿ... ಎಂಬAತೆ ತಮ್ಮ ತಮ್ಮೊಳಗೇ ಗುಸು ಗುಸು ಚರ್ಚೆ ಮಾಡಿಕೊಳ್ಳುತ್ತಿದ್ದಾರೆ. ಕೆಲ ದಿನಗಳಿಂದ ಜಿಲ್ಲೆಯಲ್ಲಿ ಬಿ.ಜೆ.ಪಿ.ಯ ಈ ಬೆಳವಣಿಗೆ ಸುದ್ದಿಗೆ ಗ್ರಾಸವಾಗುತ್ತಿದ್ದು, ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಜಿಲ್ಲೆಯಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿ ಯಾದರೂ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ರಾಬಿನ್ ದೇವಯ್ಯ ಅವರಾಗಲಿ ಅಥವಾ ಜಿಲ್ಲಾ ಸಮಿತಿಯಾಗಲೀ ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ. ಅಲ್ಲದೆ ಪಕ್ಷದ ನಿಲುವು ಏನು ಎಂಬ ಕುರಿತೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದೂ ಕೂಡ ರಾಜಕೀಯ ವಲಯದಲ್ಲಿ ಪ್ರಶ್ನಾರ್ಹವಾಗಿದೆ.
ಕೋಟೆಯ ಸುಭದ್ರತೆ ಹಿಂದಿನAತೆಯೇ ಉಳಿಯಲಿದೆಯೇ ಅಥವಾ ಅಲುಗಾಡಲಿದೆಯೇ ಎಂಬದು ಜನಸಾಮಾನ್ಯರು - ರಾಜಕೀಯಾಸಕ್ತರ ಕುತೂಹಲ ಕೆರಳಿಸುತ್ತಿದೆ.
- ಶಶಿ ಸೋಮಯ್ಯ