ಮಡಿಕೇರಿ, ಆ. ೧೧: ಕೊಡವರಿಗೆ ಮತ್ತು ಜಮ್ಮ ಹಿಡುವಳಿದಾರರಿಗೆ ಬಂದೂಕು ಪರವಾನಗಿ ವಿನಾಯಿತಿ ಬಗ್ಗೆ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದು, ಫೆಡರೇಷನ್ ಆಫ್ ಕೊಡವ ಸಮಾಜ,(ಮೊದಲ ಪುಟದಿಂದ) ಕೊಡವ ನ್ಯಾಷನಲ್ ಕೌನ್ಸಿಲ್ ಮತ್ತು ಕೊಡವ ಸಮಾಜ ಬೆಂಗಳೂರು ದಾಖಲಿಸಿದ ಅರ್ಜಿಗಳನ್ನು ಪುರಸ್ಕರಿಸಿ ಇವರುಗಳನ್ನು ಪ್ರತಿವಾದಿಗಳನ್ನಾಗಿ ಸೇರಿಸಲು ನ್ಯಾಯಾಲಯ ಆದೇಶ ಮಾಡಿದೆ.ಈ ಸಂಸ್ಥೆಗಳ ಆಕ್ಷೇಪಣೆಗಳು ಏನೇ ಇದ್ದರೂ ಅದನ್ನು ಲಿಖಿತರೂಪದಲ್ಲಿ ಸಲ್ಲಿಸಲು ಎರಡು ವಾರಗಳ ಕಾಲಾವಕಾಶವನ್ನು ನ್ಯಾಯಾಲಯ ನೀಡಿದೆ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರಕ್ಕೆ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಎರಡು ವಾರಗಳ ಗಡುವು ನೀಡಿದೆ.ಪ್ರಕರಣದ ವಿಚಾರಣೆಯನ್ನು ತಾ. ೩೧ ಕ್ಕೆ ಮುಂದೂಡಲಾಗಿದ್ದು, ಫೆಡರೇಷನ್ ಆಫ್ ಕೊಡವ ಸಮಾಜ ಮತ್ತು ಕೊಡವ ನ್ಯಾಷನಲ್ ಕೌನ್ಸಿಲ್ ಪರವಾಗಿ ಹಿರಿಯ ವಕೀಲರಾದ ಎ.ಎಸ್.ಪೊನ್ನಣ್ಣ ಹಾಗೂ ಕೊಡವ ಸಮಾಜ ಬೆಂಗಳೂರು ಪರವಾಗಿ ಹಿರಿಯ ವಕೀಲ ಸಜನ್ ಪೂವಯ್ಯ ಅವರು ಹಾಜರಾಗಿದ್ದರು. ಕೇಂದ್ರ ಸರ್ಕಾರದ ಪರವಾಗಿ ಅಡಿಷನಲ್ ಸಾಲಿಸಿಟರ್ ಜನರಲ್ ನರಗುಂದ ಅವರು ಹಾಜರಾಗಿದ್ದರು. ಅರ್ಜಿಯ ವಿಚಾರಣೆಯನ್ನು ಹಿರಿಯ ನ್ಯಾಯಾಧೀಶರುಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಸಚಿನ್ ಮಗ್ದುಂ ಅವರ ವಿಭಾಗೀಯ ಪೀಠ ಕೈಗೆತ್ತಿಕೊಂಡಿತ್ತು.