ಮಡಿಕೇರಿ, ಆ. ೧೧; ಬೆಂಗಳೂರಿನಲ್ಲಿ ನೆಲೆಸಿದ್ದ ಕೊಡಗು ಜಿಲ್ಲೆಯ ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಸ್ಥರಲ್ಲಿ ಕೊಲೆ ಶಂಕೆ ವ್ಯಕ್ತಗೊಂಡಿರುವ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ಮೂಲತಃ ಜಿಲ್ಲೆಯ ಬಿಟ್ಟಂಗಾಲ ಗ್ರಾಮ ನಿವಾಸಿ, ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನೆಲೆಸಿದ್ದ ಪುಚ್ಚಿಮಂಡ ನೀರಜ್ ಎಂಬವರ ಪತ್ನಿ ಪ್ರಕೃತಿ(೨೮) ಸಾವಿಗೀಡಾದ ದುರ್ದೈವಿ. ನಿನ್ನೆ ಮಧ್ಯಾಹ್ನ ವೇಳೆ ಮನೆಯಲ್ಲಿ ಪ್ರಕೃತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ, ಮೃತಳ ಕುಟುಂಬಸ್ಥರು ಆಗಮಿಸುವ ಮುನ್ನ, ಮಹಜರು ಮಾಡುವ ಮುನ್ನವೇ ಮೃತದೇಹವನ್ನು ಹಗ್ಗದಿಂದ ಬಿಚ್ಚಿ ಕೆಳಗಿಳಿಸಿದ್ದು, ಕೋಣೆಯೊಳಗೆ ಹಾಗೂ ಮುಖದ ಮೇಲೆ ರಕ್ತದ ಕಲೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬAಧ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಬಸವೇಶ್ವರ ನಗರ ಠಾಣಾ ಪೊಲೀಸರು ಅಪರಾಧ ಸಂಖ್ಯೆ ೧೭೪ಸಿ ಸೆಕ್ಷನ್‌ನಡಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ನೈಜಾಂಶ ತಿಳಿಯಲಿದೆ.

ದಕ್ಷಿಣ ಕೊಡಗಿನ ಬಾಡಗರಕೇರಿಯ ಬಲ್ಯಮೀದೇರಿರ ಪೊನ್ನಪ್ಪ ಹಾಗೂ ರೋಹಿಣಿ ಅವರ ಪುತ್ರಿ ಪ್ರಕೃತಿಯನ್ನು ೨೦೧೯ರ ಡಿಸೆಂಬರ್‌ನಲ್ಲಿ ನೀರಜ್‌ನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಮೃತರು ಪತಿ ಹಾಗೂ ಒಂದು ವರ್ಷ ಪ್ರಾಯದ ಗಂಡು ಮಗುವನ್ನು ಅಗಲಿದ್ದಾರೆ. -ಸಂತೋಷ್